ಕರ್ನಾಟಕ

karnataka

ETV Bharat / state

ಆಕ್ಷೇಪಾರ್ಹ ಟ್ವೀಟ್ ಪ್ರಕರಣ: ನೋಟಿಸ್​ ಸ್ವೀಕರಿಸದ ಅಮಿತ್ ಮಾಳವೀಯ, ಬಿ.ವೈ. ವಿಜಯೇಂದ್ರ - offensive tweet case - OFFENSIVE TWEET CASE

ಆಕ್ಷೇಪಾರ್ಹ ಟ್ವೀಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಿತ್ ಮಾಳವೀಯ ಮತ್ತು ಬಿ.ವೈ. ವಿಜಯೇಂದ್ರಗೆ ನೀಡಲಾಗಿದ್ದ ನೋಟಿಸ್​ ಸ್ವೀಕರಿಸಲು ನಿರಾಕರಿಸಿದ್ದಾರೆ.

ನೊಟೀಸ್ ಸ್ವೀಕರಿಸದ ಅಮಿತ್ ಮಾಳವೀಯ, ಬಿ.ವೈ.ವಿಜಯೇಂದ್ರ
ನೊಟೀಸ್ ಸ್ವೀಕರಿಸದ ಅಮಿತ್ ಮಾಳವೀಯ, ಬಿ.ವೈ.ವಿಜಯೇಂದ್ರ (Etv Bharat)

By ETV Bharat Karnataka Team

Published : May 11, 2024, 1:36 PM IST

ಬೆಂಗಳೂರು: ರಾಜ್ಯ ಬಿಜೆಪಿ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಕಟಿಸಿದ್ದ ಆಕ್ಷೇಪಾರ್ಹ ಪೋಸ್ಟ್ ಕುರಿತು ದಾಖಲಾಗಿರುವ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಬಿಜೆಪಿಯ ಐಟಿ ಸೆಲ್ ವಿಭಾಗದ ರಾಷ್ಟ್ರೀಯ ಸಂಚಾಲಕ ಅಮಿತ್ ಮಾಳವೀಯ ಹಾಗೂ ಬಿಜೆಪಿ‌ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಗೆ ನೀಡಲಾಗಿದ್ದ ನೋಟಿಸ್ ಖುದ್ದು ಸ್ವೀಕರಿಸಲು ತಿರಸ್ಕರಿಸಿದ್ದಾರೆ.

ಇದೇ ಪ್ರಕರಣದಲ್ಲಿ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಖುದ್ದು ಅವರ ನಿವಾಸಕ್ಕೆ ತೆರಳಿ ಶೀಘ್ರದಲ್ಲಿ ನೋಟಿಸ್ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಮೇ 6ರಂದು ನೋಟಿಸ್ ಜಾರಿಗೊಳಿಸಿರುವ ಹೈಗ್ರೌಂಡ್ಸ್ ಠಾಣಾ ಪೊಲೀಸರು, ನೋಟಿಸ್ ತಲುಪಿದ 7 ದಿನಗಳ ಒಳಗೆ ಪ್ರಕರಣದ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ಸೂಚಿಸಿದ್ದರು.

ಪಶ್ಚಿಮ ಬಂಗಳಾದ ಕೃಷ್ಣನಗರದಲ್ಲಿ ಅಮಿತ್ ಮಾಳವಿಯ ನಿವಾಸಕ್ಕೆ‌ ಖುದ್ದು ತೆರಳಿ ನೋಟಿಸ್ ನೀಡಲು‌ ಪೊಲೀಸರು ಮುಂದಾಗಿದ್ದರು. ಆದರೆ ನೇರವಾಗಿ ಬಂದು ನೋಟಿಸ್ ನೀಡುವ ಅಗತ್ಯವಿಲ್ಲ‌‌ ಎಂದು ಇ-ಮೇಲ್ ಮುಖಾಂತರ ಸ್ವೀಕರಿಸಿದ್ದಾರೆ. ಬಳಿಕ ಈ ಬಗ್ಗೆ ನಮ್ಮ ವಕೀಲರು ನೋಡಿಕೊಳ್ಳಲಿದ್ದಾರೆ. ಇದೇ ರೀತಿ 40ಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿವೆ ಎಂದು ಅಮಿತ್ ಮಾಳವೀಯ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಘಟನೆ ಹಿನ್ನೆಲೆ;ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ಅವರು ಎಸ್.ಸಿ, ಎಸ್.ಟಿ ಮತ್ತಿತರ ಹಿಂದುಳಿದ ವರ್ಗಗಳ ಹೆಸರಿನ ಮೊಟ್ಟೆಗಳಿರುವ ಗೂಡಿನಲ್ಲಿ ಮುಸ್ಲಿಂ ಹೆಸರಿನ ಮೊಟ್ಟೆಯನ್ನು ತಂದಿಟ್ಟು ಅದು ಮರಿಯಾದ ನಂತರ ಇತರೆ ಮರಿಗಳಿಗೆ ಸೇರಬೇಕಾದ ಆಹಾರವನ್ನ ಮುಸ್ಲಿಂ ಹೆಸರಿನ ಮರಿಗೆ ನೀಡಿ ಪೋಷಿಸುವಂತೆ, ನಂತರ ಮುಸ್ಲಿಂ ಹೆಸರಿನ ಮೊಟ್ಟೆಯಿಂದ ಹೊರಬಂದ ಮರಿ ಕೊನೆಗೆ ಇತರೆ ಹಕ್ಕಿಗಳನ್ನ ಓಡಿಸುತ್ತಿರುವಂತೆ ಸೂಚಿಸುವ ಕಾರ್ಟೂನ್ ವಿಡಿಯೋವೊಂದನ್ನ ಎಚ್ಚರ..ಎಚ್ಚರ..ಎಚ್ಚರ..! ಎಂಬ ಬರಹದೊಂದಿಗೆ ಮೇ 4ರಂದು ಬಿಜೆಪಿ ಕರ್ನಾಟಕ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿತ್ತು.

ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಚುನಾವಣಾ ಆಯೋಗದ ನಿಯಮಗಳನ್ನು ಉಲ್ಲಂಘಿಸಿ ಸಮುದಾಯಗಳ ನಡುವೆ ದ್ವೇಷ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿಯ ಪೋಸ್ಟ್ ವಿರೋಧಿಸಿ ಕೆಪಿಸಿಸಿಯ ಮಾಧ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ದೂರು ನೀಡಿದ್ದರು. ಅದರನ್ವಯ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.

ಇದನ್ನೂ ಓದಿ:ಎಕ್ಸ್ ಪೋಸ್ಟ್​: ನಡ್ಡಾ, ಮಾಳವಿಯಾ, ವಿಜಯೇಂದ್ರ ವಿರುದ್ಧ ಎಫ್ಐಆರ್ - Case against X post

ABOUT THE AUTHOR

...view details