ಕರ್ನಾಟಕ

karnataka

ETV Bharat / state

ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮದ ತನಿಖೆ: 'ಸಿಎಂ, ಡಿಸಿಎಂ ಹೆಸರು ಹೇಳುವಂತೆ ಇಡಿ ಒತ್ತಡ'-ಐವರು ಸಚಿವರ ಆರೋಪ - Valmiki Corporation Scam - VALMIKI CORPORATION SCAM

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಇಡಿ ತನಿಖಾ ಸಂಸ್ಥೆ ಸಿಎಂ, ಡಿಸಿಎಂ ಸೇರಿದಂತೆ ಸಚಿವರುಗಳ ಹೆಸರು ಹೇಳುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದೆ ಎಂದು ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣಭೈರೇಗೌಡ, ದಿನೇಶ್​​ ಗುಂಡೂರಾವ್​​, ಪ್ರಿಯಾಂಕ್ ಖರ್ಗೆ ಹಾಗು ಸಂತೋಷ್​ ಲಾಡ್ ಆರೋಪಿಸಿದ್ದಾರೆ.

ಇ.ಡಿ. ತನಿಖಾ ಸಂಸ್ಥೆ ಮೇಲೆ ಪಂಚ ಸಚಿವರ ಆರೋಪ
ರಾಜ್ಯ ಸರ್ಕಾರದ ಐವರು ಸಚಿವರಿಂದ ಸುದ್ದಿಗೋಷ್ಟಿ (ETV Bharat)

By ETV Bharat Karnataka Team

Published : Jul 18, 2024, 12:55 PM IST

ಬೆಂಗಳೂರು: "ವಾಲ್ಮೀಕಿ ಹಗರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಸಿಎಂ, ಡಿಸಿಎಂ ಸೇರಿದಂತೆ ಸಚಿವರುಗಳ ಹೆಸರು ಹೇಳುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದೆ" ಎಂದು ಐವರು ಸಚಿವರು ಗಂಭೀರ ಆರೋಪ ಮಾಡಿದ್ದಾರೆ.

ವಿಧಾನಸೌಧದಲ್ಲಿ ಇಂದು ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣಭೈರೇಗೌಡ, ದಿನೇಶ್​​ ಗುಂಡೂರಾವ್​​, ಪ್ರಿಯಾಂಕ್ ಖರ್ಗೆ ಮತ್ತು ಸಂತೋಷ್​ ಲಾಡ್​ ಸುದ್ದಿಗೋಷ್ಟಿ ಉದ್ದೇಶಿಸಿ ಕೇಂದ್ರ ಸರ್ಕಾರ ಹಾಗು ಇಡಿ ವಿರುದ್ಧ ವಾಗ್ದಾಳಿ ನಡೆಸಿದರು.

"ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಿಎಂ, ಡಿಸಿಎಂ, ಸಚಿವರುಗಳ ಹೆಸರನ್ನು ಹೇಳಿ. ನಾವು ನಿಮ್ಮನ್ನು ಕಾನೂನಾತ್ಮಕವಾಗಿ ರಕ್ಷಿಸುತ್ತೇವೆ ಎಂದು ಅಧಿಕಾರಿಗಳಿಗೆ ಒತ್ತಡ ಹೇರಲಾಗುತ್ತಿದೆ" ಎಂದು ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದರು.

"ಭೋವಿ ಅಭಿವೃದ್ಧಿ ನಿಗಮ, ಅಂಬೇಡ್ಕರ್​ ನಿಗಮದಲ್ಲಿ ನಡೆದ ಹಗರಣದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಆಗಿದೆ. ಕೋವಿಡ್​ ಅಕ್ರಮದ ಬಗ್ಗೆ ಏಕೆ ತನಿಖೆ ಮಾಡಿಲ್ಲ?. ವಿರೋಧ ಪಕ್ಷದಲ್ಲಿದ್ದಾಗ ಕೇಸ್ ಹಾಕುತ್ತಾರೆ. ಬಿಜೆಪಿಗೆ ಬಂದರೆ ಅವರಿಗೆ ಕ್ಲೀನ್‌ಚಿಟ್ ನೀಡಲಾಗುತ್ತದೆ. ಐಟಿ, ಇಡಿ, ಸಿಬಿಐ ಬಳಸಿಕೊಂಡು ಸರ್ಜಿಕಲ್ ಸ್ಟ್ರೈಕ್ ರೀತಿಯಲ್ಲಿ ವಿರೋಧ ಪಕ್ಷದ ಮೇಲೆ ದಾಳಿ ಮಾಡುತ್ತಿದ್ದಾರೆ" ಎಂದು ಅಸಮಾಧಾನ ಹೊರಹಾಕಿದರು.

ರಾಜ್ಯ ಸರ್ಕಾರವನ್ನು ಉರುಳಿಸಲು ಯತ್ನ:"ಇಡಿಯನ್ನು ಬಳಸಿಕೊಂಡು ಕಾಂಗ್ರೆಸ್ ಸರ್ಕಾರವನ್ನು ಬುಡಮೇಲು ‌ಮಾಡುವ ಪ್ರಯತ್ನವನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ. ವಾಲ್ಮೀಕಿ ನಿಗಮ ಹಗರಣದ ತನಿಖೆ ನಡೆಸಲಾಗುತ್ತದೆ. ತನಿಖೆಗೆ ಒಳಪಟ್ಟವರ ಮೇಲೆ ಒತ್ತಡ ತಂದು ಸರ್ಕಾರದ ಉನ್ನತ ಮಟ್ಟದಲ್ಲಿ ಇರುವವರ ಹೆಸರು ಹೇಳಬೇಕು ಎಂದು ಇಡಿ ಒತ್ತಡ ಹೇರುತ್ತಿದೆ. ಈ ಮೂಲಕ ಚುನಾಯಿತ ಸರ್ಕಾರವನ್ನು ಉರುಳಿಸುಲ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ" ಎಂದು ಗಂಭೀರ ಆರೋಪ ಮಾಡಿದರು.

"ತನಿಖೆಯ ಅಂಶಗಳು ಸೆಲೆಕ್ಟಿವ್​ ಆಗಿ ಸೋರಿಕೆ ಆಗುತ್ತಿದೆ. ಇಡಿ‌‌ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡುವ ಮುನ್ನವೇ ಮಾಹಿತಿ ಹೇಗೆ ಸೋರಿಕೆಯಾಯಿತು?. ಮಾಹಿತಿ ನೀಡುವುದು ಇಡಿ ಕೆಲಸ, ಮಾಡಲಿ. ತನಿಖೆ ಮಾಡಿ ಕೋರ್ಟ್​ನಲ್ಲಿ ಆರೋಪಪಟ್ಟಿ ಸಲ್ಲಿಸಲಿ. ರಾಜಕೀಯ ಉದ್ದೇಶಕ್ಕಾಗಿ ಅವರು ತನಿಖಾ ಮಾಹಿತಿ ಸೋರಿಕೆ ಮಾಡುತ್ತಿದ್ದಾರೆ"ಎಂದು ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದರು.

"ಇದು ಬಿಜೆಪಿಯವರ ಎಸ್ಒ​ಪಿ ಆಗಿದೆ.‌ ಕಳೆದ 10 ವರ್ಷದಲ್ಲಿ ಎಷ್ಟು ಸರ್ಕಾರವನ್ನು ಕೇಂದ್ರ ಇಡಿ, ಐಟಿ, ಸಿಬಿಐ ಮೂಲಕ ಬೀಳಿಸಿದೆ. ಗೋವಾ, ಮಣಿಪುರ, ಉತ್ತರಾಖಾಂಡ್, ಕರ್ನಾಟಕ, ಮಧ್ಯಪ್ರದೇಶದಲ್ಲಿ ಸರ್ಕಾರ ಪತನ ಮಾಡಿದ್ದಾರೆ. 444 ಶಾಸಕರನ್ನು ಖರೀದಿಸಲಾಗಿದೆ‌‌. ಬಿಜೆಪಿಯವರ ಮೇಲೆಯೂ ಐಟಿ, ಇಡಿ ಕೇಸ್‌ಗಳಿವೆ. ಅವರ ಮೇಲೆ ಎಲ್ಲಾ ಕೇಸುಗಳು ಏಕೆ ಸ್ಥಗಿತವಾಗಿವೆ?."

"ಬಿಜೆಪಿ ಸೇರಿದರೆ ಆರೋಪಿ ರಾಜಕೀಯ ನಾಯಕರು ಕಾನೂನು ಕುಣಿಕೆಯಿಂದ ಪಾರಾಗುತ್ತಾರೆ. 121 ರಾಜಕೀಯ ನಾಯಕರ ಮೇಲೆ ದಾಳಿ ಮಾಡಿದೆ. ಈ ಪೈಕಿ 115 ವಿಪಕ್ಷಗಳ ಮೇಲೆ ದಾಳಿ ಮಾಡಿದೆ. 3,000 ಇ.ಡಿ, ಐಟಿ, ಸಿಬಿಐ ದಾಳಿಗಳಾಗಿವೆ. ಅದರಲ್ಲಿ ಶೇ 25ರಷ್ಟು ಮಾತ್ರ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ ಮೇಲೆ ಅಕ್ರಮ ಆಸ್ತಿ ಪ್ರಕರಣ ಇದೆ. ಬಿಜೆಪಿ ರಾಜ್ಯಾಧ್ಯಕ್ಷ ಪದೇ ಪದೇ ದುಬೈಗೆ ಹೋಗುತ್ತಾರೆ ಎಂದು ಅವರ ಪಕ್ಷದ ಹಾಲಿ ಶಾಸಕರೇ ಆರೋಪಿಸುತ್ತಿದ್ದಾರೆ. ಈ ಕುರಿತು ಏಕೆ ತನಿಖೆ ಮಾಡುತ್ತಿಲ್ಲ?" ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ಧಾಳಿ ನಡೆಸಿದರು.

ರಾಜಕೀಯ ದುರುದ್ದೇಶದ ತನಿಖೆ- ಸಚಿವ ಜಾರ್ಜ್:ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ಕುರಿತ ಇಡಿ ತನಿಖೆ ರಾಜಕೀಯ ದುರುದ್ದೇಶದ ತನಿಖೆ ಎಂದು ಸಚಿವ ಕೆ.ಜೆ.ಜಾರ್ಜ್ ದೂಷಿಸಿದರು. ಬಿಜೆಪಿಯವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಸಿದ್ದರಾಮಯ್ಯ ನಾಯಕತ್ವದಲ್ಲಿ ಬಹುಮತದಿಂದ ಸರ್ಕಾರ ಬಂದಿದೆ. ಬಹುಶ: ಸರ್ಕಾರದ ಕಾರ್ಯಕ್ರಮಗಳನ್ನು ಅವರಿಗೆ ಸಹಿಸಲು ಆಗುತ್ತಿಲ್ಲ. ಚುನಾಯಿತ ಸರ್ಕಾರವನ್ನು ಬೀಳಿಸಲು ತನಿಖಾ ಸಂಸ್ಥೆಯನ್ನು ಬಳಸುತ್ತಿದ್ದಾರೆ. ಎಲ್ಲಾ ಕೇಸ್‌ಗಳಲ್ಲಿ ಇಡಿ ಅಧಿಕೃತವಾಗಿ ತನಿಖಾ ಪ್ರಕ್ರಿಯೆಯ ಅಂಶಗಳನ್ನೇಕೆ ಬಿಡುಗಡೆ ಮಾಡುತ್ತಿಲ್ಲ" ಎಂದು ಅವರು ಪ್ರಶ್ನಿಸಿದರು.

ಇದನ್ನೂ ಓದಿ:ವಾಲ್ಮೀಕಿ ನಿಗಮ ಹಗರಣದ ಹಣ ಮದ್ಯ ಖರೀದಿಗೆ ಬಳಕೆ: ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ ಇಡಿ - Valmiki Corporation Scam Case

ABOUT THE AUTHOR

...view details