ಬೆಂಗಳೂರು: ಚಿನ್ನಾಭರಣ ವಂಚನೆ ಪ್ರಕರಣದಲ್ಲಿ ಬಂಧಿತರಾಗಿ ಪೊಲೀಸ್ ವಶದಲ್ಲಿರುವ ಐಶ್ವರ್ಯ ಗೌಡ ದಂಪತಿಗೆ ಮತ್ತೊಂದು ಸಂಕಷ್ಟ ಶುರುವಾಗಿದೆ.
ಮಾಜಿ ಸಂಸದ ಡಿ.ಕೆ.ಸುರೇಶ್ ತಂಗಿ ಎಂದು ಪರಿಚಯಿಸಿಕೊಂಡು ಮಹಿಳೆಯಿಂದ 3.25 ಕೋಟಿ ನಗದು ಹಾಗೂ 430 ಗ್ರಾಂ ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿದ ಆರೋಪದಡಿ ಶಿಲ್ಪಾ ಗೌಡ ಎಂಬವರು ನೀಡಿದ ದೂರಿನ ಮೇರೆಗೆ ಐಶ್ವರ್ಯ ಗೌಡ ಪತಿ ಕೆ.ಎನ್.ಹರೀಶ್ ಹಾಗೂ ಬೌನ್ಸರ್ ಗಜಾ ಎಂಬವರ ವಿರುದ್ಧ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ತಾನು ಆರ್.ಆರ್.ನಗರದಲ್ಲಿ ನೆಲೆಸಿದ್ದು, ಇದೇ ಏರಿಯಾದಲ್ಲಿ ಐಶ್ವರ್ಯ ಗೌಡ ನಿವಾಸಿಯಾಗಿದ್ದಳು. ತಾನು ಡಿ.ಕೆ.ಸುರೇಶ್ ಸಹೋದರಿ ಎಂದು ಪರಿಚಯಿಸಿಕೊಂಡಿದ್ದಳು. ಚಿನ್ನ ವ್ಯಾಪಾರ, ಚಿಟ್ ಫಂಡ್ಸ್ ಹಾಗೂ ರಿಯಲ್ ಎಸ್ಟೇಟ್ನಲ್ಲಿ ತೊಡಗಿಸಿಕೊಂಡಿದ್ದೇನೆ, ತಮ್ಮ ವ್ಯವಹಾರದಲ್ಲಿ ಹಣ ಹೂಡಿದರೆ ಹೆಚ್ಚು ಹಣ ಸಂಪಾದಿಸಬಹುದು. ಅಲ್ಲದೆ, ತಮ್ಮ ಬಳಿ ಚಿನ್ನ ಖರೀದಿಸಿದರೆ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ನೀಡುವುದಾಗಿ ಐಶ್ವರ್ಯ ಗೌಡ ಆಮಿಷವೊಡ್ಡಿದ್ದಳು. ಇದನ್ನು ನಂಬಿ ನಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಂದ ಪಡೆದಿದ್ದ 65 ಲಕ್ಷ ಹಣ ನೀಡಿದ್ದೆ. ಆ ಬಳಿಕ 2022ರಿಂದ 2024ರವರೆಗೆ ಹಂತ ಹಂತವಾಗಿ 3.25 ಕೋಟಿಯನ್ನು ಪತಿ ಹರೀಶ್ ಸೇರಿ ಇತರರ ಬ್ಯಾಂಕ್ ಖಾತೆಗಳಿಗೆ ಐಶ್ವರ್ಯ ಗೌಡ ವರ್ಗಾಯಿಸಿಕೊಂಡಿದ್ದಳು ಎಂದು ಶಿಲ್ಪಾ ಗೌಡ ತಮ್ಮ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ನಡುವೆ 2023ರ ಜೂನ್ನಲ್ಲಿ ವ್ಯವಹಾರಕ್ಕೆ ತುರ್ತು ಹಣ ಬೇಕು. ನಿನ್ನ ಬಳಿಯಿರುವ ಚಿನ್ನಾಭರಣ ನೀಡಿದರೆ ಅವುಗಳನ್ನು ಅಡವಿಟ್ಟು ಬಂದ ಹಣವನ್ನು ಬಿಸಿನೆಸ್ಗೆ ಬಳಸಿಕೊಂಡು ಲಾಭ ಬಂದ ಕೂಡಲೇ ಚಿನ್ನಾಭರಣ ಬಿಡಿಸಿಕೊಡುವುದಾಗಿ ತನ್ನನ್ನು ಐಶ್ವರ್ಯ ಗೌಡ ನಂಬಿಸಿದ್ದಳು. ಗೆಳತಿಯ ಮಾತು ನಂಬಿ ಐಶ್ವರ್ಯಳ ಬೌನ್ಸರ್ ಆಗಿದ್ದ ಗಜಾ ಎಂಬಾತನ ಮೂಲಕ 430 ಗ್ರಾಂ ಚಿನ್ನ ನೀಡಿದ್ದೆ. ಆದರೆ, ಇದಾದ ಬಳಿಕ ನನ್ನೊಂದಿಗೆ ಆರೋಪಿತೆಯು ಅಂತರ ಕಾಯ್ದುಕೊಂಡಿದ್ದಳು. ಅನುಮಾನ ಬಂದು ತಾನು ನೀಡಿದ ಹಣ ಹಾಗೂ ಆಭರಣ ವಾಪಸ್ ನೀಡುವಂತೆ ಕೇಳಿದಾಗ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಳು. ತನಗೆ ರಾಜಕಾರಣಿಗಳ ಬೆಂಬಲವಿದ್ದು ನಿನಗೆ ಒಂದು ಗತಿ ಕಾಣಿಸುತ್ತೇನೆ. ನಿನ್ನ ಚಾರಿತ್ರ್ಯದ ಬಗ್ಗೆ ಇಲ್ಲಸಲ್ಲದ ಸುದ್ದಿ ಹಬ್ಬಿಸಿ ಮರ್ಯಾದೆ ಕಳೆಯುವಂತೆ ಮಾಡುತ್ತೇನೆ ಎಂದು ಐಶ್ವರ್ಯ ಬೆದರಿಕೆ ಹಾಕಿದ್ದಳು ಎಂದು ಶಿಲ್ಪಾ ದೂರಿನಲ್ಲಿ ವಿವರಿಸಿದ್ದಾರೆ.
ಐಶ್ಚರ್ಯ ಗೌಡ ಸೇರಿ ಮೂವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.