ಬೆಂಗಳೂರು :ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವ ಕೆ.ಗೋಪಾಲಯ್ಯಗೆ ಜೀವ ಬೆದರಿಕೆಯೊಡ್ಡಿದ ಆರೋಪದಡಿ ಬಿಬಿಎಂಪಿ ಬಸವೇಶ್ವರನಗರ ವಾರ್ಡ್ ಮಾಜಿ ಕಾರ್ಪೋರೇಟರ್ ಪದ್ಮರಾಜ್ ವಿರುದ್ಧ ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮಂಗಳವಾರ ತಡರಾತ್ರಿ 11 ಗಂಟೆ ಸುಮಾರಿಗೆ ಕರೆ ಮಾಡಿದ್ದ ಪದ್ಮರಾಜ್, ತಮಗೆ ಅವಾಚ್ಯವಾಗಿ ನಿಂದಿಸಿ, ಹತ್ಯೆಯ ಬೆದರಿಕೆ ಹಾಕಿರುವುದಾಗಿ ಕಾಮಾಕ್ಷಿಪಾಳ್ಯ ಠಾಣೆಗೆ ಕೆ.ಗೋಪಾಲಯ್ಯ ದೂರು ನೀಡಿದ್ದಾರೆ.
ತಾವು ಹಾಗೂ ಪದ್ಮರಾಜ್ ನಡುವೆ ಯಾವುದೇ ಹಣಕಾಸಿನ ವ್ಯವಹಾರವಿಲ್ಲ. ಆದರೂ ಸಹ ತಡರಾತ್ರಿ 11 ಗಂಟೆ ಸುಮಾರಿಗೆ ತಮಗೆ ಕರೆ ಮಾಡಿದ್ದ ಪದ್ಮರಾಜ್, ''ತನಗೆ ಖರ್ಚಿಗೆ ಹಣ ನೀಡಬೇಕು, ಇಲ್ಲವಾದಲ್ಲಿ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ನನ್ನ ಕಡೆಯ ಹುಡುಗರನ್ನ ಕಳಿಸಿ ಇಡೀ ಕುಟುಂಬವನ್ನೇ ಹತ್ಯೆ ಮಾಡಿಸುವುದಾಗಿ'' ಬೆದರಿಕೆ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ತಾವು ಹಾಗೂ ತಮ್ಮ ಕುಟುಂಬಕ್ಕೆ ಯಾವುದೇ ಹಾನಿಯಾದರೂ ಸಹ ಪದ್ಮರಾಜ್ ಹೊಣೆಗಾರನಾಗಿರುತ್ತಾರೆ'' ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸರ ವಿಚಾರಣೆ ವೇಳೆ ತಾವೇ ಗೋಪಾಲಯ್ಯಗೆ 15 ಲಕ್ಷ ರೂ. ಕೊಟ್ಟಿರುವುದಾಗಿ ಪದ್ಮರಾಜ್ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಸಚಿವರಾಗಿದ್ದ ಗೋಪಾಲಯ್ಯನವರಿಗೆ ಟ್ರಸ್ಟ್ಗಾಗಿ ಹಾಗೂ ಕಾಮಗಾರಿಯ ಟೆಂಡರ್ ಪಡೆದುಕೊಳ್ಳಲು 15 ಲಕ್ಷ ರೂ. ಹಣ ನೀಡಿದ್ದೆ. ಹಣ ಕೇಳಲು ಮನೆ ಬಳಿಗೆ ಹೋದಾಗ ಮನೆಯಲ್ಲಿ ಇರಲಿಲ್ಲ. ಹಾಗಾಗಿ, ಕರೆ ಮಾಡಿದ್ದೆ, ಅವರೇ ಫೋನ್‌ನಲ್ಲಿ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಪೊಲೀಸ್ ವಿಚಾರಣೆ ವೇಳೆ ಪದ್ಮರಾಜ್ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಗೋಪಾಲಯ್ಯ ನೀಡಿರುವ ದೂರಿನನ್ವಯ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ಡಿಸಿಪಿ ಪ್ರತಿಕ್ರಿಯೆ: ''ಈಗಾಗಲೇ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಠಾಣೆಗೆ ಕರೆತಂದು ವಿಚಾರಣೆ ಮಾಡುತ್ತಿದ್ದೇವೆ. ಇಬ್ಬರಿಂದಲೂ ಹೇಳಿಕೆ ಪಡೆದುಕೊಳ್ಳಲಾಗಿದೆ. ತನಿಖೆ ಪ್ರಾರಂಭಿಕ ಹಂತದಲ್ಲಿರುವುದರಿಂದ ಸತ್ಯಾಸತ್ಯತೆಯ ಕುರಿತು ಸೂಕ್ತ ತನಿಖೆಯಾಗಬೇಕಿದೆ'' ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.
ಓದಿ:ಸ್ವಾಮಿನಾಥನ್ ಆಯೋಗದ ಪ್ರಮುಖ 10 ಶಿಫಾರಸುಗಳು ಹೀಗಿವೆ