ಎಸ್ಪಿ ಅಂಶು ಕುಮಾರ್ ಪ್ರತಿಕ್ರಿಯೆ (ETV Bharat) ಹಾವೇರಿ:ಲವ್ ಮಾಡಿ ಹುಡುಗಿಯನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಆರೋಪಿಸಿ ಯುವಕನ ತಾಯಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿದ ಆರೋಪ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿ ಕೇಳಿ ಬಂದಿದೆ. ನಾಲ್ಕು ದಿನಗಳ ಹಿಂದೆ ನಡೆದಿದ್ದ ಈ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ಹಲ್ಲೆಗೊಳಗಾದ ಮಹಿಳೆಯನ್ನ 50 ವರ್ಷದ ಹನುಮವ್ವ ಮೆಡ್ಲೇರಿ ಎಂದು ಗುರುತಿಸಲಾಗಿದೆ. ಚಂದ್ರಪ್ಪ, ಗಂಗಪ್ಪ ಹಾಗೂ ಗುತ್ತೆವ್ವ ಎಂಬುವರು ಹನುಮವ್ವಳನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹನುಮವ್ವಳ ಪುತ್ರ ಮಂಜುನಾಥ ಯುವತಿಯನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಆರೋಪಿಸಿ ಚಂದ್ರಪ್ಪ, ಗಂಗಪ್ಪ, ಗುತ್ತೆವ್ವ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಯುವಕ, ಯುವತಿಯ ಕಡೆಯಿಂದ ಪ್ರತ್ಯೇಕ ದೂರು ದಾಖಲು:ಗಾಯಗೊಂಡ ಮಹಿಳೆ ಹನುಮವ್ವ ಅವರನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಘಟನೆ ಸಂಬಂಧಿಸಿದಂತೆ ಯುವಕ ಮತ್ತು ಯುವತಿಯ ಕಡೆಯವರಿಂದ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಎರಡು ಪ್ರಕರಣ ದಾಖಲಾಗಿವೆ. ಈ ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಎಸ್ಪಿ ಅಂಶು ಕುಮಾರ್ ಹೇಳಿಕೆ ಹೀಗಿದೆ:ಹಾವೇರಿ ಜಿಲ್ಲೆಯಲ್ಲಿ ಮಹಿಳೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ಅಂಶು ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ''ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನರನ್ನು ಬಂಧಿಸಲಾಗಿದೆ. ಹಲ್ಲೆಗೊಳಗಾದ ಮಹಿಳೆ ಸುರಕ್ಷಿತವಾಗಿ ಇದ್ದಾಳೆ. ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಪತ್ತೆಯಾಗಿರುವ ಯುವಕ ಹಾಗೂ ಯುವತಿ ಪತ್ತೆ ಮಾಡಲಾಗುತ್ತಿದೆ. ಇಬ್ಬರು ಮೇಜರ್ ಇದ್ದು ಪರಸ್ಪರ ಎರಡು ವರ್ಷದಿಂದ ಪ್ರೀತಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ಪ್ರಕರಣ ತನಿಖೆ ಹಂತದಲ್ಲಿದ್ದು, ಇದರಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚುತ್ತೇವೆ'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಉತ್ತರ ಕನ್ನಡ: ಕಾಂಗ್ರೆಸ್ ಮುಖಂಡನ ಮನೆ ಮೇಲೆ ಐಟಿ ದಾಳಿ - IT RAID IN SIRSI