ಬೆಳಗಾವಿ: "ಬ್ರಿಟಿಷರ ವಿರುದ್ಧ ದಿಗ್ವಿಜಯ ಸಾಧಿಸಿದ ಚನ್ನಮ್ಮನ ಕಿತ್ತೂರು ಉತ್ಸವಕ್ಕೆ ಈ ವರ್ಷ 200ನೇ ವರ್ಷಾಚರಣೆ ಹಿನ್ನೆಲೆ ಈ ಬಾರಿ ವಿಶ್ವ ಮಟ್ಟದ ಕಾರ್ಯಕ್ರಮವನ್ನಾಗಿ ವಿಜೃಂಭಣೆಯಿಂದ ಆಚರಿಸಲಾಗುವುದು. ಆ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ" ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಕಿತ್ತೂರಿನ ಶೆಟ್ಟರ್ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಚನ್ನಮ್ಮನ ಕಿತ್ತೂರು ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. "200ನೇ ವರ್ಷದ ವಿಜಯೋತ್ಸವದ ಪ್ರಯುಕ್ತ ದೇಶದ ವಿವಿಧ ರಾಜ್ಯಗಳ ಆಹಾರ ಪದ್ಧತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಅನ್ನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಈ ಬಾರಿಯ ಉತ್ಸವದ ನೆನಪಿಗಾಗಿ ರಾಣಿ ಚನ್ನಮ್ಮನ ಭಾವಚಿತ್ರವಿರುವ ಅಂಚೆ ಚೀಟಿ ಬಿಡುಗಡೆಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ವಾಯವ್ಯ ಕರ್ನಾಟಕ ಸಾರಿಗೆ ಹೆಸರನ್ನು "ಕಿತ್ತೂರು ಕರ್ನಾಟಕ ಸಾರಿಗೆ ಸಂಸ್ಥೆ" ಎಂದು ಹಾಗೂ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಬದಲಾಗಿ "ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ' ಎಂದು ಮರುನಾಮಕರಣಕ್ಕಾಗಿ ಈಗಾಗಲೇ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ" ಎಂದು ತಿಳಿಸಿದರು.
"ಈ ಬಾರಿ ಕಿತ್ತೂರು ಉತ್ಸವದ ಮೆರವಣಿಗೆಯಲ್ಲಿ ಕೇವಲ ನಂದಿ ಧ್ವಜಕ್ಕೆ ಅನುಮತಿಸಲಾಗುವುದು. ಅಕ್ಟೋಬರ್ 23ರಿಂದ ಮೂರು ದಿನಗಳ ಕಾಲ ಜರುಗಲಿರುವ ಉತ್ಸವದಲ್ಲಿ ರಾಷ್ಟ್ರಮಟ್ಟದ ಕಲಾವಿದರ ಜತೆಗೆ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು" ಎಂದರು.
"ಈ ಬಾರಿಯ ಕಿತ್ತೂರು ಉತ್ಸವದ ಅಂಗವಾಗಿ ಏರ್ ಶೋ ಆಯೋಜನೆಗಾಗಿ ಕೇಂದ್ರ ರಕ್ಷಣಾ ಸಚಿವಾಲಯವನ್ನು ಸಂಪರ್ಕಿಸಲಾಗಿದೆ. ಏರ್ ಷೋ ನಡೆಯುವ ವಿಶ್ಚಾಸವಿದೆ. ಉತ್ಸವದ ಅಂಗವಾಗಿ ಪಾರಂಪರಿಕ ಕ್ರೀಡೆಗಳ ಆಯೋಜನೆಗೆ ಪಟ್ಟಿ ತಯಾರಿಸಲಾಗುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದ ಕುಸ್ತಿ ಆಯೋಜನೆಗೆ ಚಿಂತನೆ ಮಾಡುತ್ತಿದ್ದೇವೆ" ಎಂದು ಹೇಳಿದರು.