ಕಾರವಾರ:ದೇಶದಲ್ಲಿ 7 ಹಂತದಲ್ಲಿ ನಡೆದ ಲೋಕಸಭೆ ಚುನಾವಣೆಯ ಫಲಿತಾಂಶ ಜೂನ್ 4 ರಂದು ಹೊರಬೀಳಲಿದೆ. ಈ ಸಂಬಂಧಉತ್ತರ ಕನ್ನಡ ಜಿಲ್ಲೆಯಲ್ಲಿ ಮತ ಎಣಿಕೆಗೆ ಕುಮಟಾದ ಡಾ. ಎ. ವಿ. ಬಾಳಿಗಾ ಕಾಲೇಜಿನಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಒಟ್ಟು 9 ರೂಮ್ಗಳಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.
ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಹಿತಿ ನೀಡಿದ ಅವರು, 'ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಒಟ್ಟು 8 ಮತ ಎಣಿಕೆ ಕೊಠಡಿಗಳನ್ನು ಗುರುತಿಸಲಾಗಿದ್ದು, ಪ್ರತಿ ಕೊಠಡಿಯಲ್ಲಿ 14 ಟೇಬಲ್ಗಳನ್ನು ಅಳವಡಿಸಲಾಗಿದೆ. ಇದಲ್ಲದೆ ಮತ್ತೊಂದು ಕೊಠಡಿಯಲ್ಲಿ ಅಂಚೆ ಮತಪತ್ರಗಳ ಎಣಿಕೆ ನಡೆಯಲಿದೆ. ಮತ ಎಣಿಕಾ ಕಾರ್ಯಕ್ಕೆ 112 ಮತ ಎಣಿಕೆ ಮೇಲ್ವಿಚಾರಕರು, 112 ಮತ ಎಣಿಕೆ ಸಹಾಯಕರು ಹಾಗೂ 112 ಮೈಕ್ರೋ ಅಬ್ಸರ್ವರ್ ಗಳನ್ನು ನೇಮಿಸಲಾಗಿದೆ. ಮತ ಎಣಿಕೆಯ ಸಿಬ್ಬಂದಿಗೆ 2 ಹಂತದಲ್ಲಿ ತರಬೇತಿಯನ್ನು ನೀಡಲಾಗಿದೆ' ಎಂದರು.
'ಅಂಚೆ ಮತಪತ್ರಗಳ ಎಣಿಕೆಗಾಗಿ 20 ಟೇಬಲ್ಗಳನ್ನು ಹಾಕಲಾಗಿದ್ದು, 20 ಮಂದಿ ಸಹಾಯಕ ಎಣಿಕೆಯ ಅಧಿಕಾರಿಗಳು, 20 ಮಂದಿ ಎಣಿಕೆ ಮೇಲ್ವಿಚಾರಕರು, 40 ಮಂದಿ ಎಣಿಕೆ ಸಹಾಯಕರು ಹಾಗೂ 20 ಮಂದಿ ಮೈಕ್ರೋ ಅಬ್ಸರ್ವರ್ಗಳನ್ನು ನೇಮಿಸಲಾಗಿದ್ದು, ಇಟಿಪಿಬಿಎಸ್ ಮತಗಳ ಎಣಿಕೆಗಾಗಿ ಪ್ರತ್ಯೇಕ ಕೊಠಡಿಯನ್ನು ತೆರೆಯಲಾಗಿದೆ. ಮತ ಎಣಿಕೆ ಕಾರ್ಯಕ್ಕಾಗಿ ಒಟ್ಟು 562 ಅಧಿಕಾರಿ ಸಿಬ್ಬಂದಿ ನೇಮಕ ಮಾಡಲಾಗಿದೆ'.