ಬೆಂಗಳೂರು : ನಾಳೆ ವಿಧಾನಸೌಧದ ಮೆಟ್ಟಿಲುಗಳ ಬಳಿ ನಡೆಯಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ರಾಜ್ಯ ಮಟ್ಟದ ಎರಡನೇ ಜನತಾ ದರ್ಶನ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ನಡೆದಿವೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಲಿರುವ ಸಾರ್ವಜನಿಕರು ಸಲ್ಲಿಸುವ ದೂರು ಹಾಗೂ ಮನವಿಗಳನ್ನು ಸ್ವೀಕರಿಸಲು ಇಲಾಖಾವಾರು ಕೌಂಟರ್ಗಳು, ಅಧಿಕಾರಿಗಳ ನಿಯೋಜನೆ ಹಾಗೂ ಎಸ್ಒಪಿ ಜಾರಿ ಮಾಡಿ ಆದೇಶಿಸಲಾಗಿದೆ.
ಇಲಾಖಾವಾರು ಕೌಂಟರ್ಗಳು : ಮುಖ್ಯಮಂತ್ರಿಯವರ ಜನತಾದರ್ಶನ ನಡೆಯುವ ಸ್ಥಳದಲ್ಲಿ ಸಚಿವಾಲಯದ ಎಲ್ಲಾ ಇಲಾಖೆಗಳ ಸ್ಟಾಲ್ಗಳನ್ನು ಅಳವಡಿಸಲಾಗಿದ್ದು, ಪ್ರತಿ ಸ್ಟಾಲ್ಗಳಿಗೆ ಸಂಖ್ಯೆಯನ್ನು ನೀಡಲಾಗಿದೆ. ಜನತಾದರ್ಶನಕ್ಕಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ನಾಗರಿಕರನ್ನು ಪ್ರಥಮ ಹಂತದಲ್ಲಿ ವಿಚಾರಿಸಿ, ಯಾವ ಇಲಾಖೆಯ ಸ್ಟಾಲ್ಗೆ ನಿರ್ದೇಶಿಸಿ ಕಳುಹಿಸಬೇಕು ಎಂದು ವಿಂಗಡಿಸಲು ಅನುಭವಿ ಅಧಿಕಾರಿ - ಸಿಬ್ಬಂದಿ ವಿಚಾರಣಾ ಕೌಂಟರ್ (enquiry counter) ತೆರೆಯಲಾಗಿದೆ.
ಅಲ್ಲಿ ನಾಗರಿಕರ ಮೊಬೈಲ್ ನಂಬರ್ ಮತ್ತು ಪ್ರಾಥಮಿಕ ವಿವರಗಳನ್ನು ದಾಖಲಿಸಲು ರಿಜಿಸ್ಟರ್ ಹಾಗೂ ಅವರನ್ನು ಯಾವ ಇಲಾಖೆಗೆ ಕಳುಹಿಸಲಾಗಿದೆ ಎಂದು ಸ್ಟಾಲ್ ನಂಬರ್ ನಮೂದಿಸಲಾಗುವುದು. ಸ್ಟಾಲ್ಗಳಲ್ಲಿ ನಾಗರಿಕರಿಗೆ ಕುಳಿತುಕೊಳ್ಳಲು ಕುರ್ಚಿಗಳ ವ್ಯವಸ್ಥೆ, ವಯೋವೃದ್ಧರು / ಹಿರಿಯ ನಾಗರಿಕರು / ವಿಕಲಚೇತನರು / ಗರ್ಭಿಣಿಯರು / ಸಣ್ಣ ಮಕ್ಕಳೊಂದಿಗೆ ಬಂದಂತಹ ನಾಗರಿಕರಿಗೆ ಆದ್ಯತೆ ನೀಡಲು ಸೂಚಿಸಲಾಗಿದೆ.
ಇಲಾಖೆಯ ಕಾರ್ಯದರ್ಶಿಗಳು ತಮ್ಮ ಇಲಾಖೆಯ ಸಚಿವಾಲಯದ ಹಾಗೂ ಅಧೀನ ಇಲಾಖೆಯ ಮುಖ್ಯಸ್ಥರು, ಅಧಿಕಾರಿ, ಸಿಬ್ಬಂದಿಯವರ ತಂಡದೊಡನೆ ಸ್ಟಾಲ್ನಲ್ಲಿದ್ದು, ಜನತಾದರ್ಶನಗಳಲ್ಲಿ ಬಂದ ಅರ್ಜಿಗಳನ್ನು ನಾಗರಿಕರಿಂದ ಸ್ವೀಕರಿಸಲಿದ್ದಾರೆ.
ಹಿರಿಯ ನಾಗರಿಕರು,ವಿಕಲಚೇತನರಿಗೆ ವ್ಹೀಲ್ ಚೇರ್ ವ್ಯವಸ್ಥೆ : ವಯೋವೃದ್ಧರು / ಹಿರಿಯ ನಾಗರಿಕರು / ವಿಕಲಚೇತನರು / ಗರ್ಭಿಣಿಯರಿಗಾಗಿ ಬ್ಯಾಟರಿ ಚಾಲಿತ buggy/Wheel Chairs ಗಳ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಂಬಂಧಿಸಿದ ಇಲಾಖೆಯ ಸ್ಟಾಲ್ಗೆ ಅವರನ್ನು ಕರೆದೊಯ್ಯುವ ವ್ಯವಸ್ಥೆಯಾಗಿದೆ.