ಜಿಲ್ಲಾಧಿಕಾರಿ ಅವಿನಾಶ್ ಮೆನನ್ (ETV Bharat) ರಾಮನಗರ:"ಜೂನ್ 4ರಂದು ಲೋಕಸಭಾ ಚುನಾವಣೆ ಮತ ಎಣಿಕೆ ಹಿನ್ನೆಲೆ ರಾಮನಗರ ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ" ಎಂದು ರಾಮನಗರ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ರಾಮನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ನಡೆಸಲಾಗುವುದು. ಮತ ಎಣಿಕೆ ಕಾರ್ಯಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಬೆಳಗ್ಗೆ 6ಕ್ಕೆ ಸ್ಟ್ರಾಂಗ್ ರೂಂ ಓಪನ್ ಮಾಡಿ ಬೆಳಗ್ಗೆ 8 ಗಂಟೆಯಿಂದ ಏಣಿಕೆ ಕಾರ್ಯ ಆರಂಭವಾಗಲಿದೆ. ಎಣಿಕಾ ಕೇಂದ್ರದ 18 ಕೊಠಡಿಗಳಲ್ಲಿ 137 ಟೇಬಲ್‍ಗಳಲ್ಲಿ ಎಣಿಕೆ ಮಾಡಲಾಗುವುದು." ಎಂದರು.
"22 ಸುತ್ತುಗಳಲ್ಲಿ ಎಣಿಕಾ ಕಾರ್ಯ ನಡೆಸಲಿರುವ ಸಿಬ್ಬಂದಿಯ ಪ್ರತಿ ಟೇಬಲ್‍ಗೆ ಮೈಕ್ರೋ ಅಬ್ಸರ್ವರ್, ಸೂಪರ್ವೈಸರ್, ಕೌಂಟಿಂಗ್ ಅಸಿಸ್ಟೆಂಟ್ ನೇಮಕ ಮಾಡಲಾಗಿದೆ." ಎಣಿಕಾ ಕೇಂದ್ರದಲ್ಲಿ ಮೊಬೈಲ್, ಸ್ಮಾರ್ಟ್ ವಾಚ್, ಕ್ಯಾಲ್ಕ್ಯುಲೇಟರ್ ನಿಷೇಧಿಸಲಾಗಿದ್ದು, ಪಾಸ್ ಪಡೆದ ಏಜೆಂಟ್ಗಳು ಹಾಗೂ ಅಭ್ಯರ್ಥಿಗಳಿಗೆ ಮಾತ್ರ ಎಣಿಕಾ ಕೇಂದ್ರಕ್ಕೆ ಪ್ರವೇಶ ನೀಡಲಾಗಿದೆ. ಇದಲ್ಲದೇ ರಾಮನಗರ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ ಮಾಡಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ." ಎಂದು ತಿಳಿಸಿದರು.
ಸಂಭ್ರಮಾಚರಣೆ ಇಲ್ಲ: ಗೆದ್ದ ಅಭ್ಯರ್ಥಿಗಳು ಯಾವುದೇ ಸಂಭ್ರಮಾಚರಣೆ, ಮೆರವಣಿಗೆ ಮಾಡುವಂತಿಲ್ಲ. ಪಟಾಕಿ ಸಿಡಿಸಲು ಅನುಮತಿ ಇಲ್ಲ. ಎಣಿಕಾ ಕೇಂದ್ರದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಭದ್ರತೆಗೆ 650 ಮಂದಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಇದಲ್ಲದೇ ಮೂರು ಕೆಎಸ್ಆರ್ಪಿ, ನಾಲ್ಕು ಡಿಆರ್ ತುಕಡಿಗಳ ನಿಯೋಜನೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಅವಿನಾಶ್ ಮೆನನ್, ಎಸ್ಪಿ ಕಾರ್ತಿಕ್ ರೆಡ್ಡಿ ಮನವಿ ಮಾಡಿದರು.
ಮತ ಎಣಿಕೆಗೆ ಕೌಂಟ್ ಡೌನ್ ಆರಂಭ - ಗಡಿಜಿಲ್ಲೆ ಚಾಮರಾಜನಗರದಲ್ಲಿ ಸಕಲ ಸಿದ್ಧತೆ:"ಚಾಮರಾಜನಗರ ಲೋಕಸಭಾ ಕ್ಷೇತ್ರದ ಮತ ಎಣಿಕೆಯು ಜೂನ್ 4ರಂದು ನಡೆಯಲಿದ್ದು, ಎಣಿಕೆ ಕಾರ್ಯಕ್ಕಾಗಿ ಜಿಲ್ಲಾಡಳಿತದ ವತಿಯಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಚಾಮರಾಜನಗರದ ತಾಲೂಕಿನ ಬೇಡರಪುರದಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯವು ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ" ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ತಿಳಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್ (ETV Bharat) "ಎಣಿಕೆ ಕಾರ್ಯವನ್ನು ಸುಲಲಿತವಾಗಿ ನಡೆಸುವ ಸಲುವಾಗಿ ಕಂಪ್ಯೂಟರ್, ಸ್ಕ್ಯಾನರ್, ಪ್ರಿಂಟರ್ಸ್, ಯುಪಿಎಸ್, ಟೆಲಿಫೋನ್, ಇಂಟರ್ನೆಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಶಾಂತಿ ಮತ್ತು ಸುವ್ಯವಸ್ಥೆ ಮತ್ತು ಸುರಕ್ಷಿತವಾಗಿ ನಡೆಸಲು ಅಗತ್ಯ ಬ್ಯಾರಿಕೇಡಿಂಗ್, ಸಿಗ್ನಲ್ಸ್ ಮತ್ತು ವಾಹನ ನಿಲುಗಡೆಯನ್ನು ಕಲ್ಪಿಸಲಾಗಿದೆ." ಎಂದರು.
"ಅಂಚೆ ಮತಪತ್ರಗಳ ಮೂಲಕ ಒಟ್ಟು 4,405 ಮತ ಚಲಾವಣೆಯಾಗಿವೆ. ಪ್ರತಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯು ತಲಾ 14 ಟೇಬಲ್ (ಮೇಜು)ಗಳಲ್ಲಿ ನಡೆಯಲಿದೆ. ಪ್ರತಿ ಟೇಬಲ್‍ಗೆ ತಲಾ 14 ಮಂದಿ ಮತ ಎಣಿಕೆ ಮೇಲ್ವಿಚಾರಕರು, 14 ಮಂದಿ ಎಣಿಕೆ ಸಹಾಯಕರು, 14 ಮಂದಿ ಮೈಕ್ರೋ ಅಬ್ಸರ್‍ವರ್ ಹಾಗೂ ಅಂಚೆ ಮತ ಪತ್ರ ಎಣಿಕೆಗೆ 5 ಮಂದಿ ಸೇರಿ ಒಟ್ಟು 45 ಸಿಬ್ಬಂದಿ ಇರಲಿದ್ದಾರೆ. ಅಂಚೆ ಮತಪತ್ರ ಎಣಿಕೆಗೆ 8 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದ್ದು, 8 ಮಂದಿ ಏಜೆಂಟ್ಗಳನ್ನು ನೇಮಕ ಮಾಡಲಾಗಿದೆ. ಅಂಚೆ ಮತಪತ್ರಗಳ ಎಣಿಕೆಯು ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಅವರ ಸಮ್ಮುಖದಲ್ಲಿ ನಡೆಯಲಿದೆ." ಎಂದು ಮಾಹಿತಿ ನೀಡಿದರು.
"ಇವಿಎಂ ಮತ ಯಂತ್ರಗಳ ಮೂಲಕ ಮತ ಎಣಿಕೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಏಜೆಂಟ್ಗಳಂತೆ ಒಟ್ಟು 120 ಮಂದಿ ಎಣಿಕೆ ಏಜೆಂಟ್ಗಳನ್ನು ನೇಮಕಾತಿ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಮತ ಎಣಿಕೆ ಟೇಬಲ್‍ಗಳಂತೆ ಒಟ್ಟು 112 ಮತ ಎಣಿಕೆ ಟೇಬಲ್‍ಗಳನ್ನು ಸ್ಥಾಪಿಸಲಾಗಿದೆ. ಮತ ಎಣಿಕೆ ಟೇಬಲ್‍ಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ ಎಣಿಕೆ ಕಾರ್ಯವನ್ನು ಸಂಬಂಧಿಸಿದ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ನಡೆಸಲಾಗುತ್ತದೆ." ಎಂದು ಹೇಳಿದರು.
ಚಾಮರಾಜನಗರದಲ್ಲಿ ಮತ ಎಣಿಕೆಗೆ ಸಕಲ ಸಿದ್ಧತೆ (ETV Bharat) "ಸೇವಾ ಮತದಾರರು ಮತದಾನ ಮಾಡಿ ಕಳುಹಿಸಿರುವ ಮತಪತ್ರಗಳ ಎಣಿಕೆಯನ್ನು ಇಟಿಪಿಬಿಎಸ್ ತಂತ್ರಾಂಶದಲ್ಲಿ ನಡೆಸಲು 2 ಮತ ಎಣಿಕೆ ಟೇಬಲ್‍ಗಳನ್ನು ಸ್ಥಾಪಿಸಲಾಗಿದೆ. ನಮೂನೆ- 18ರಲ್ಲಿ ಮತ ಎಣಿಕೆ ಏಜೆಂಟ್ಗಳನ್ನು ನೇಮಕ ಮಾಡಲು ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳಿಗೆ ಎಣಿಕೆ ನಡೆಯುವ ಸ್ಥಳ, ಎಣಿಕೆ ಕಾರ್ಯದ ಸಮಯ ಮತ್ತು ಎಣಿಕೆ ಕಾರ್ಯ ನಡೆಸುತ್ತಿರುವ ಟೇಬಲ್‍ಗಳ ವಿವರವನ್ನು ನೀಡಲಾಗಿದೆ." ಎಂದರು.
"ಅಂಚೆ ಮತಪತ್ರಗಳ ಎಣಿಕೆಯು ಪ್ರಾರಂಭವಾದ 30 ನಿಮಿಷಗಳ ನಂತರ, ಇವಿಎಂ ಮತ ಎಣಿಕೆಯನ್ನು ಪ್ರಾರಂಭ ಮಾಡಲಾಗುತ್ತದೆ. ಸ್ಟ್ರಾಂಗ್ ರೂಂ ಭದ್ರತೆಗಾಗಿ ಅಗತ್ಯ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಭದ್ರತೆ ಕಾರ್ಯಕ್ಕಾಗಿ ಕೆ.ಎಸ್.ಆರ್.ಪಿ ಹಾಗೂ ಮೀಸಲು ಪೊಲೀಸ್ ಪಡೆ ನಿಯೋಜಿಸಲಾಗಿದೆ. 80 ಮಂದಿ ಅಧಿಕಾರಿಗಳು, 300 ಸಿಬ್ಬಂದಿ ಹಾಗೂ 350 ಮಂದಿ ಗೃಹರಕ್ಷಕ ದಳ ಸಿಬ್ಬಂದಿಯನ್ನು ನೀಯೋಜಿಸಲಾಗಿದೆ." ಎಂದು ತಿಳಿಸಿದರು.
ಇದನ್ನೂ ಓದಿ:ಲೋಕಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಹೇಗಿರಲಿದೆ ಗೊತ್ತಾ? - Vote Counting Process