ಹಾವೇರಿ:''ಜಿಲ್ಲೆಯ ಹಾನಗಲ್ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ'' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ತಿಳಿಸಿದರು. ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಹೈದರಾಬಾದ್, ಬೆಳಗಾವಿ, ಉತ್ತರ ಕನ್ನಡ, ದಾವಣಗೆರೆ ಸೇರಿದಂತೆ ಗೋವಾದಲ್ಲಿ
ಆರೋಪಿಗಳು ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಓರ್ವ ಆರೋಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಡಿಸ್ಚಾರ್ಜ್ ಆಗುತ್ತಿದ್ದಂತೆ ಆತನನ್ನೂ ಸಹ ಬಂಧಿಸಲಾಗುವುದು'' ಎಂದರು.
''ಆರೋಪಿಗಳ ಬಂಧನಕ್ಕೆ ಹಾವೇರಿ ಎಎಸ್ಪಿ ಗೋಪಾಲ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ವಿಡಿಯೋದಲ್ಲಿ ಕಾಣಿಸಿದವರನ್ನೂ ಬಂಧಿಸಲಾಗಿದೆ. ಪ್ರಕರಣದಲ್ಲಿ ನೇರವಾಗಿ ಭಾಗಿಯಾದವ ಬಂಧನವಾಗಿದೆ. ವಿಡಿಯೋ ಮಾಡಿದವರು, ಮಾಹಿತಿ ಕೊಟ್ಟ ಆಟೋದವನು ಮತ್ತು ಅತ್ಯಾಚಾರ ಮಾಡಿರುವ ಏಳು ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತೋರ್ವ ಕಾಲೇಜು ಯುವತಿಗೆ ಕಿರುಕುಳ ನೀಡಿದ ವಿಡಿಯೋಗಳ ಮೇಲೆ ಸ್ವಯಂಪ್ರೇರಿತ (ಸುಮೊಟೊ ಕೇಸ್) ದೂರು ದಾಖಲಿಸಿಕೊಳ್ಳಲಾಗಿತ್ತು. ಸುಮೊಟೊ ಕೇಸ್‌ನಲ್ಲಿರುವ ಆರೋಪಿಗಳು ಗ್ಯಾಂಗ್‌ರೇಪ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ'' ಎಂದು ಎಸ್ಪಿ ಮಾಹಿತಿ ನೀಡಿದರು.
''ಇಬ್ಬರು ಆರೋಪಿಗಳು ಎರಡೂ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಅವರಿಗೆ ಯಾವುದೇ ಸಂಘಟನೆಗಳ ಲಿಂಕ್ ಇಲ್ಲ. ರೌಡಿಶೀಟರ್ಸ್ ಇಲ್ಲ. ಈ ಪ್ರಕರಣದ ಕುರಿತಂತೆ 60 ದಿನಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಕೆ ಆಗುತ್ತೆ. ಲಾಡ್ಜ್ ಬಗ್ಗೆಯೂ ರಿಪೋರ್ಟ್ ಕೇಳಿದ್ದೇವೆ. ಗ್ಯಾಂಗ್ ರೇಪ್ ಪ್ರಕರಣದ ಮಾಹಿತಿ ಸರಿಯಾಗಿ ಸಂಗ್ರಹವಾಗದ ಹಿನ್ನೆಲೆಯಲ್ಲಿ ಸಿಪಿಐ ಹಾಗೂ ಒಬ್ಬರು ಕಾನ್ಸ್‌ಟೆಬಲ್ ಸಸ್ಪೆಂಡ್ ಆಗಿದ್ದಾರೆ. ಆ ಸಂದರ್ಭದಲ್ಲಿ ರಾಜಿ ಮಾಡಿಕೊಳ್ಳುವ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ. ಇನ್ನೂ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ಮೇಲೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.