ಬೆಂಗಳೂರು:ರಾಜ್ಯದ ಎಲ್ಲ 28 ಕ್ಷೇತ್ರಗಳ ಕುರಿತು ಚರ್ಚೆಯಾಗಿದೆ. ನಾಳೆ-ನಾಡಿದ್ದು ಲೋಕಸಭಾ ಚುನಾವಣೆ ಸಂಬಂಧಿಸಿದ ರಾಜ್ಯದ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡು ಬಿಡುಗಡೆ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಲೋಕಸಭಾ ಚುನಾವಣಾ ಹಿನ್ನೆಲೆ ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಭಾರತೀಯ ಜನತಾ ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿಯ ಸಭೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಸಂಬಂಧಿಸಿ ಎಲ್ಲ ಅಭ್ಯರ್ಥಿಗಳ ಕುರಿತು ಚರ್ಚೆ ನಡೆದಿದೆ. ಮೊದಲ ಹಂತದಲ್ಲಿ ಎಷ್ಟು ಅಭ್ಯರ್ಥಿಗಳನ್ನು ಘೋಷಿಸಬಹುದು ಎಂಬ ಮಾಹಿತಿ ಇಲ್ಲ ಎಂದರು.
28 ಕ್ಷೇತ್ರಗಳ ಅಭ್ಯರ್ಥಿಗಳ ಕುರಿತು ಚರ್ಚೆ ಆಗಿದೆ. ಅಪೇಕ್ಷಿತರ ಕುರಿತು ಚರ್ಚೆ ಆಗಿದೆ. ಅಂತಿಮವಾಗಿ ಕೇಂದ್ರದ ವರಿಷ್ಠರು ಕುಳಿತು ನಿರ್ಧಾರ ಮಾಡುತ್ತಾರೆ. ಬಹುಶಃ ಇನ್ನು ಎರಡ್ಮೂರು ದಿನಗಳಲ್ಲಿ ತಮ್ಮ ನಿರ್ಧಾರ ಘೋಷಿಸುತ್ತಾರೆ ಎಂದು ತಿಳಿಸಿದರು.
ಜೆಡಿಎಸ್‍ಗೆ ಎಷ್ಟು ಸೀಟು ಎಂಬ ಬಗ್ಗೆಯೂ ಚರ್ಚೆ ಆಗಿದೆ. ಜೆಡಿಎಸ್ ವರಿಷ್ಠರ ಜೊತೆಗೂ ಚರ್ಚೆ ಮಾಡಿ ಎರಡ್ಮೂರು ದಿನಗಳಲ್ಲಿ ಎಲ್ಲವೂ ತೀರ್ಮಾಣ ಆಗಲಿದೆ ಎಂದು ನುಡಿದರು. ‘ಹಾಲಿ ಸಂಸದರಿಗೆ ಟಿಕೆಟ್ ಇದೆಯೇ ಇಲ್ಲವೇ?’ ಎನ್ನುವ ಕುರಿತು ಚರ್ಚೆ ಆಗಿದೆ. ಯಾರಿಗೆ ಕೊಡಲಿದ್ದಾರೆ, ಯಾರಿಗೆ ಇಲ್ಲ ಎಂಬುದು ಅಂತಿಮವಾಗಿ ನಿರ್ಧಾರ ಆಗಬೇಕಿದೆ. ಎರಡು ಹಂತಗಳಲ್ಲಿ ಬಿಜೆಪಿ ಪಟ್ಟಿ ಹೊರಬರಬಹುದು ಎಂದು ವಿಜಯೇಂದ್ರ ಮಾಹಿತಿ ನೀಡಿದರು.
ಓದಿ:ಬಿಜೆಪಿ ಸಿಇಸಿ ಸಭೆ ಮುಕ್ತಾಯ: ಕರ್ನಾಟಕ, ತೆಲಂಗಾಣ ಸೇರಿ 7 ರಾಜ್ಯಗಳ 90 ಅಭ್ಯರ್ಥಿಗಳ ಹೆಸರು ಅಂತಿಮ