ಹುಬ್ಬಳ್ಳಿ:ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದಲಾವಣೆ ಕೂಗು ಜೋರಾಗಿ ಕೇಳಿ ಬರುತ್ತಿದ್ದಂತೆ ಅಹಿಂದ ಶಕ್ತಿ ಪ್ರವರ್ಧಮಾನಕ್ಕೆ ಬಂದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಅವರ ಬೆನ್ನಿಗೆ ನಿಂತಿರುವ ಅಹಿಂದ ಸಂಘಟನೆ ಮತ್ತೊಮ್ಮೆ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿದೆ.
ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ಅಹಿಂದ ರಾಜ್ಯಾಧ್ಯಕ್ಷ ಪ್ರಭುಲಿಂಗ ದೊಡ್ಡಣಿ ನೇತೃತ್ವದಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನ್ಮದಿನಾಚರಣೆ ನಿಮಿತ್ತ ಆಗಸ್ಟ್ ತಿಂಗಳಲ್ಲಿ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಅಹಿಂದ ವತಿಯಿಂದ ಬೃಹತ್ ಸಮಾವೇಶ ಹಾಗೂ ಸಿದ್ದರಾಮಯ್ಯನವರ ಜನ್ಮ ದಿನಾಚರಣೆಯನ್ನು ಆಚರಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಅಲ್ಲದೆ ಅದೇ ದಿನದಂದು ಕರ್ನಾಟಕದ ಅಹಿಂದ ಒಕ್ಕೂಟದ ವತಿಯಿಂದ ಅಹಿಂದ ಸಂಘಟನೆಯನ್ನು ಹುಟ್ಟುಹಾಕಿದ ಸಿದ್ದರಾಮಯ್ಯನವರ ಜನಪರ ಕಾಳಜಿಗೆ "ಸಿದ್ದರಾಮಯ್ಯ ಅಹಿಂದ ರತ್ನ" ಪ್ರಶಸ್ತಿಯನ್ನು ಕರ್ನಾಟಕದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವಂತ 50 ಗಣ್ಯ ವ್ಯಕ್ತಿಗಳಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಅಹಿಂದ ರಾಜ್ಯಾಧ್ಯಕ್ಷ ಪ್ರಭುಲಿಂಗ ದೊಡ್ಡಣಿ ಹೇಳಿದರು.
ಸಿಎಂ ಬದಲಾದರೆ ಕಾಂಗ್ರೆಸ್ ಅಸ್ತಿತ್ವ ಉಳಿಯುವುದಿಲ್ಲ- ದೊಡ್ಡಣಿ: ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಮಾವೇಶದ ಪೂರ್ವಭಾವಿ ಸಭೆ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಬದಲಾವಣೆ ಕೂಗು ಕೇಳಿ ಬರುತ್ತಿದೆ. ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಮಾಡಿದ್ರೆ ಕಾಂಗ್ರೆಸ್ ಅಸ್ತಿತ್ವದಲ್ಲಿ ಉಳಿಯೋದಿಲ್ಲ. ನಾವು ಯಾವಾಗಲೂ ಸಿದ್ದರಾಮಯ್ಯ ಅವರಿಗೆ ಬೆನ್ನೆಲುಬಾಗಿ ನಿಲ್ತೆವೆ. ಕಳೆದ ಎರಡು ದಿನಗಳ ಹಿಂದೆ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಈ ರೀತಿಯ ಹೇಳಿಕೆಯಿಂದ ಧಕ್ಕೆ ಉಂಟಾಗುತ್ತದೆ ಎಂದರು.