ಹಾವೇರಿ:ಹಾವೇರಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ರೈತರು ಜಮೀನುಗಳನ್ನು ಹದಗೊಳಿಸುತ್ತಿದ್ದಾರೆ. ಇನ್ನು ಕೆಲವರು ಮುಂಗಾರುಪೂರ್ವ ಮಳೆಗೆ ಬಿತ್ತನೆ ಮಾಡುತ್ತಿದ್ದಾರೆ. ಕೆಲವು ರೈತರು ಶೇಂಗಾ ಮತ್ತು ಸೋಯಾಬಿನ್ ಬಿತ್ತನೆಗೆ ಭರದ ಸಿದ್ಧತೆ ನಡೆಸಿದ್ದು ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಕ್ಕಾಗಿ ಮುಗಿಬೀಳುತ್ತಿದ್ದಾರೆ.
ಕೃಷಿಗೆ ಬೇಕಾದ ವಾತಾವರಣ ಇನ್ನೂ ಕಂಡುಬಂದಿಲ್ಲ: ಆದರೆ, ಪೂರ್ವ ಮುಂಗಾರಿಗೆ ಬೀಜ ಬಿತ್ತದಂತೆ ಹಾವೇರಿ ಕೃಷಿ ಇಲಾಖೆಯ ಜಂಟಿ ಸಹಾಯಕ ನಿರ್ದೇಶಕ ಮಂಜುನಾಥ್ ರೈತರಲ್ಲಿ ಮನವಿ ಮಾಡಿದ್ದಾರೆ. "ಪ್ರಸ್ತುತ ವರ್ಷ ಮುಂಗಾರುಪೂರ್ವ ಮಳೆ ಉತ್ತಮವಾಗಿದೆ. ವಾಡಿಕೆಗಿಂತ ಅಧಿಕ ಪ್ರಮಾಣದಲ್ಲಿ ಮಳೆಯಾಗಿರುವುದು ರೈತರಲ್ಲಿ ಸಂತಸ ತಂದಿದೆ. ಆದರೆ ಕೃಷಿಗೆ ಬೇಕಾದ ವಾತಾವರಣ ಇನ್ನೂ ಕಂಡುಬಂದಿಲ್ಲ. ಈ ಸಂದರ್ಭದಲ್ಲಿ ರೈತರು ಬಿತ್ತನೆ ಮಾಡಿದರೆ ಸರಿಯಾದ ಪ್ರಮಾಣದಲ್ಲಿ ಬೀಜಗಳು ಮೊಳಕೆಯೊಡೆಯುವುದಿಲ್ಲ. ಅಲ್ಲದೇ ಮಣ್ಣಿನಲ್ಲಿ ಕೊಳೆತು ಹೋಗುವ ಸಾಧ್ಯತೆಯೂ ಇದೆ. ಹೀಗಾಗಿ ರೈತರು ಬಿತ್ತನೆ ಮಾಡಬಾರದು" ಎಂದು ಸಲಹೆ ನೀಡಿದರು.
ಇದೇ ವೇಳೆ, ಈ ಸಮಯದಲ್ಲಿ ಬಿತ್ತನೆ ಮಾಡಿದರೆ ಇಳುವರಿ ಪ್ರಮಾಣವೂ ಕಡಿಮೆಯಾಗಲಿದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
"ಜಿಲ್ಲೆಯ ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಕೊರತೆಯಾಗದಂತೆ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ಕಾಲಕಾಲಕ್ಕೆ ತಕ್ಕಂತೆ ರೈತರಿಗೆ ಬೀಜ, ರಸಗೊಬ್ಬರ ವಿತರಣೆ ಮಾಡಲಾಗುತ್ತದೆ. ರೈತರು ಈಗ ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿ ಮಾಡಿ ಮನೆಯಲ್ಲಿಟ್ಟುಕೊಳ್ಳಿ. ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಭೂಮಿ ಹದ ಮಾಡಿ ಮತ್ತು ವಾತಾವರಣ ತಂಪು ಇರುವ ಸಮಯದಲ್ಲಿ ಬಿತ್ತನೆ ಮಾಡಿ. ಇದರಿಂದ ಅಧಿಕ ಪ್ರಮಾಣದ ಬೆಳೆ ಬರಲಿದೆ."