ಬೆಂಗಳೂರು :ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ನಾಲ್ಕು ದಿನಗಳ ಕಾಲ ನಡೆಯುವ ಕೃಷಿ ಮೇಳಕ್ಕೆೆ ಚಾಲನೆ ಸಿಕ್ಕಿದ್ದು, ಭೌತಿಕವಾಗಿ ಕೃಷಿ ಮೇಳಕ್ಕೆೆ ಬರಲಾಗದವರು ಆನ್‌ಲೈನ್ ಮೂಲಕವೂ ವೀಕ್ಷಿಸಲು ಅವಕಾಶ ಕಲ್ಪಿಸಿಕೊಡಲಾಗಿರುವುದು ಈ ಬಾರಿಯ ವಿಶೇಷವಾಗಿದೆ.
ಹವಾಮಾನ ಚತುರ ಡಿಜಿಟಲ್ ಎಂಬ ಘೋಷವಾಕ್ಯದೊಂದಿಗೆ ಜಿಕೆವಿಕೆಯಲ್ಲಿ ಆಯೋಜಿಸಿರುವ ಕೃಷಿ ಮೇಳಕ್ಕೆೆ ಇಂದು ಬೆಳಗ್ಗೆೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಚಾಲನೆ ನೀಡಿದ್ದಾರೆ. ಸೆನ್ಸರ್ ಆಧಾರಿತ ಡ್ರೋನ್, ವಿವಿಧ ಬೆಳೆಗಳಿಗೆ ಟ್ರ್ಯಾಕ್ಟರ್‌ನಲ್ಲಿ ಔಷಧ ಸಿಂಪಡಿಸುವ ಸೆನ್ಸರ್ ಆಧಾರಿತ ಯಂತ್ರ ಹೀಗೆ ಹೊಸ ಹೊಸ ತಂತ್ರಜ್ಞಾನಗಳು ಈ ಬಾರಿ ಕೃಷಿ ಮೇಳದಲ್ಲಿ ರೈತರ ಗಮನ ಸೆಳೆಯುತ್ತಿವೆ.
ಇನ್ನು ಕೃಷಿ ಬಾಟ್ ಈ ಬಾರಿಯ ವಿಶೇಷವಾಗಿದ್ದು, ಸುಧಾರಿತ ಬಿತ್ತನೆ ತಂತ್ರಜ್ಞಾನವನ್ನು ಹೊಂದಿದ್ದು, ಪ್ರತಿ ಬೀಜವನ್ನು ಗರಿಷ್ಠ ಆಳದಲ್ಲಿ ಮತ್ತು ಗರಿಷ್ಠ ಇಳುವರಿಗಾಗಿ ಸಮಾನಾಂತರದಲ್ಲಿ ನೆಡಲಾಗುತ್ತದೆ. ಇದು ಸಮಯವನ್ನು ಉಳಿಸುವುದಲ್ಲದೇ, ಬೀಜ ವ್ಯರ್ಥವನ್ನು ಕಡಿಮೆ ಮಾಡುತ್ತದೆ ಮತ್ತು ಕ್ಷೇತ್ರದಾದ್ಯಂತ ಏಕರೂಪದ ಬೆಳವಣಿಗೆ ಖಾತ್ರಿಗೊಳಿಸುತ್ತದೆ. ಕೃಷಿ ಬಾಟ್ ಕೇವಲ ಬೀಜಗಳನ್ನು ನೆಡುವುದಲ್ಲದೇ ಗೊಬ್ಬರವನ್ನು ಪರಿಣಾಮಕಾರಿಯಾಗಿ ಸಿಂಪಡಿಸಲು ಸಹಕಾರಿಯಾಗಿರುತ್ತದೆ.
ಮಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಬೆಳೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕೃಷಿಬಾಟ್ ಅನ್ನು ಸಂಪೂರ್ಣವಾಗಿ ಸರಳ ರಿಮೋಟ್ ಸಿಸ್ಟಂ ಮೂಲಕ ನಿಯಂತ್ರಿಸಲಾಗುತ್ತದೆ. ಗೊಬ್ಬರವನ್ನು ಸಿಂಪಡಿಸುವುದು ಮತ್ತು ಕೃಷಿಯ ಸಂಪೂರ್ಣ ಪ್ರಕ್ರಿಯೆಯನ್ನು ದೂರದಿಂದಲೇ ಸುಲಭವಾಗಿ ನಿರ್ವಹಿಸಬಹುದಾಗಿದೆ. ಉಳಿದಂತೆ ಸುಧಾರಿತ ಯಂತ್ರಗಳ ಪ್ರದರ್ಶನಕ್ಕಾಗಿ ಒಂದು ಎಕರೆ ಭೂಮಿಯಲ್ಲಿ ಪ್ರತ್ಯೇಕ ಪೆವಿಲಿಯನ್ ವ್ಯವಸ್ಥೆೆ ಸೇರಿದಂತೆ ಇತರೆ ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣದ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ.
ಕೃಷಿ ಮೇಳದಲ್ಲಿ 700 ಮಳಿಗೆಗಳು ಇದ್ದು, ಅಲಂಕಾರಿಕ ಮೀನುಗಳು ಸಹ ವಿಶೇಷವಾಗಿ ಜನರ ಗಮನ ಸೆಳೆಯುತ್ತಿದೆ. ಸಿರಿಧಾನ್ಯ ಪೂರಕ ಆಹಾರಕ್ಕೆೆ ಸಂಬಂಧಿಸಿದಂತೆ ವಿಶೇಷ ಮಳಿಗೆ ತೆರೆಯಲಾಗಿದೆ. ರೈತರಿಗೆ ಅನುಕೂಲವಾಗುವ ಕೃಷಿ ಯಂತ್ರೋಪಕರಣಗಳ ಮಾರಾಟ ಕೇಂದ್ರಗಳು ಸಹ ಇವೆ.