ಬೆಂಗಳೂರು: ನಮ್ಮ ಮೆಟ್ರೋ ರೈಲು ನಿಗಮ ನಿಯಮಿತ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಡುವೆ ಒಪ್ಪಂದಕ್ಕೆ ಗುರುವಾರ ಸಹಿ ಹಾಕಲಾಗಿದೆ. ಈ ಒಪ್ಪಂದದಂತೆ ಬೆಂಗಳೂರು ಮೆಟ್ರೋ ರೈಲು ಯೋಜನೆಯ 2 ನೇಯ ಹಂತದ ಆರ್.ವಿ ರಸ್ತೆಯಿಂದ ಹಳದಿ ಮಾರ್ಗದ ಬೊಮ್ಮಸಂದ್ರ ಮೆಟ್ರೊ ನಿರ್ಮಾಣಕ್ಕೆ ಡೆಲ್ಟಾ ಇಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಹಣಕಾಸು ಕಾರ್ಯವಿಧಾನದ ಭಾಗವಾಗಿ 65 ಕೋಟಿ ರೂಪಾಯಿ ನೀಡಲಿದೆ. ಇದರ ಭಾಗವಾಗಿ ಇಂದು 10 ಕೋಟಿ ರೂಪಾಯಿ ನೀಡಿತು.
ಡೆಲ್ಟಾ ಎಲೆಕ್ಟ್ರಾನಿಕ್ಸ್ ತೈವಾನ್ ದೇಶದ ಉತ್ಪಾದನಾ ಕಂಪನಿ ಆಗಿದ್ದು, ಪರಿಸರ ಸುಸ್ಥಿರತೆಗೆ ಬಲವಾದ ಬದ್ಧತೆ ಹೊಂದಿದೆ. ಇಂಗಾಲದ ಹೆಜ್ಜೆ ಗುರುತು ಕಡಿಮೆ ಮಾಡಲು ವಿವಿಧ ಉಪಕ್ರಮಗಳನ್ನು ಜಾರಿಗೆ ತಂದಿದೆ. ಒಪ್ಪಂದದಂತೆ ಬೆಂಗಳೂರು ಮೆಟ್ರೋ ನಿಗಮ ಕರ್ನಾಟಕ ಸರ್ಕಾರದ ಅನುಮೋದನೆ ಸಹಿತ ಡೆಲ್ಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆ 30 ವರ್ಷಗಳ ಅವಧಿಗೆ ಬೊಮ್ಮಸಂದ್ರ ಮೆಟ್ರೋ ನಿಲ್ದಾಣದ ಹಕ್ಕುಗಳನ್ನು ಹೊಂದಲಿದೆ.
ಒಪ್ಪಂದದ ಸಂದರ್ಭದಲ್ಲಿ ಬಿಎಂಆರ್ಸಿಎಲ್ನ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರರಾವ್ ಮಾತನಾಡಿ, ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಸುಸ್ಥಿರ ನಗರಾಭಿವೃದ್ಧಿ ಮತ್ತು ನಗರ ಸಾರಿಗೆಗೆ ಬೆಂಬಲಿಸಲು ಮುಂದೆ ಬಂದಿರುವುದಕ್ಕೆ ಅತ್ಯಂತ ಸಂತೋಷವಾಗಿದೆ ಎಂದರು.