ಕರ್ನಾಟಕ

karnataka

ETV Bharat / state

ನೊಂದ ಮಹಿಳೆಯರಿಗೆ ಎಸ್ʼಐಟಿಯಿಂದ ಬೆದರಿಕೆ, ಕೆಲವೇ ತಿಂಗಳಲ್ಲಿ ರಾಜ್ಯ ಸರ್ಕಾರ ಧ್ವಂಸ: ಹೆಚ್​​ಡಿಕೆ ಕೆಂಡಾಮಂಡಲ - Pen drive sharing case - PEN DRIVE SHARING CASE

ಪ್ರಪಂಚದಲ್ಲಿ ಅತಿ ದೊಡ್ಡ ಲೈಂಗಿಕ ಹಗರಣ ಎಂದು ಹೇಳುತ್ತಿರುವ ಕೃಷ್ಣ ಬೈರೇಗೌಡರಿಗೆ, ನೊಂದ ಮಹಿಳೆಯರ ಅಶ್ಲೀಲ ದೃಶ್ಯಗಳನ್ನು ಪೆನ್‌ ಡ್ರೈವ್​​​ಗಳಲ್ಲಿ ತುಂಬಿಸಿ ಹಾದಿ ಬೀದಿಯಲ್ಲಿ ಹಂಚಬಾರದು ಎನ್ನುವುದು ಗೊತ್ತಿರಲಿಲ್ಲವೇ? ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

Former CM HD Kumaraswamy spoke at the press conference.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. (Etv Bharat)

By ETV Bharat Karnataka Team

Published : May 9, 2024, 10:55 PM IST

Updated : May 9, 2024, 11:06 PM IST

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. (ETV Bharat)

ಬೆಂಗಳೂರು:ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲ ಆಗುವ ರೀತಿಯಲ್ಲಿ ಹೇಳಿಕೆ ನೀಡದಿದ್ದರೆ ನಿಮ್ಮನ್ನು ವೇಶ್ಯಾವಾಟಿಕೆ ಪ್ರಕರಣದಲ್ಲಿ ಸಿಲುಕಿಸುತ್ತೇವೆ ಎಂದು ಎಸ್ಐಟಿ ಅಧಿಕಾರಿಗಳು ನೊಂದ ಮಹಿಳೆಯರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತ್ರಸ್ತ ಮಹಿಳೆ ಒಬ್ಬರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ಕೊಟ್ಟ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದರು. ಈ ತನಿಖೆ ಯಾವ ದಿಕ್ಕಿನಲ್ಲಿ ನಡೆಯುತ್ತಿದೆ ಎನ್ನುವುದು ನನಗೆ ಗೊತ್ತಿದೆ. ಸಚಿವ ಕೃಷ್ಣ ಬೈರೇಗೌಡರೇ ಈಗ ಏನು‌ ಹೇಳುತ್ತೀರಿ? ಕಂಡ ಕಂಡವರ ಮನೆ ಬಾಗಿಲಿಗೆ ಹೋಗಿ ಬೆದರಿಕೆ ಹಾಕುತ್ತಿದ್ದೀರಿ. ನಿಮ್ಮ ತನಿಖಾ ತಂಡದ ಅಧಿಕಾರಿಗಳು ನೊಂದ ಮಹಿಳೆಯರಿಗೆ ಬೆದರಿಕೆ ಹಾಕುತ್ತಿರುವುದು ಸುಳ್ಳೇ?

ಎಲ್ಲೆಲ್ಲಿ ಏನೆಲ್ಲಾ ನಿಮ್ಮ ಅಧಿಕಾರಿಗಳು ಮಾಡುತ್ತಿದ್ದಾರೆ ಎನ್ನುವ ಮಾಹಿತಿ ನನಗೂ ಬರುತ್ತಿದೆ. ನಾವು ಹೇಳಿದ ಹಾಗೆ ಹೇಳಿಕೆ ಕೊಡದಿದ್ದರೆ ನಿಮ್ಮನ್ನು ವೇಶ್ಯಾವಾಟಿಕೆ ಪ್ರಕರಣದಲ್ಲಿ ಸಿಲುಕಿಸುತ್ತೇವೆ ಎಂದು ನಿಮ್ಮ ಅಧಿಕಾರಿಗಳು ಬೆದರಿಕೆ ಹಾಕುತ್ತಿಲ್ಲವೇ? ನಿಜ ಹೇಳಿ. ಇದೇನಾ ತನಿಖೆ ನಡೆಸುವ ರೀತಿ? ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ರಕ್ಷಣೆ ಮಾಡಿರುವ ಮಹಿಳೆಯನ್ನು ಎಲ್ಲಿ ಇಟ್ಟಿದ್ದೀರಿ?:ಹಾಸನ ಅಶ್ಲೀಲ ವಿಡಿಯೋಗಳು ಹಾಗೂ ಪೆನ್ ಡ್ರೈವ್ ಹಂಚಿಕೆ ಪ್ರಕರಣದ ಬಗ್ಗೆ ಕೃಷ್ಣ ಬೈರೇಗೌಡರು ಮಾಡಿರುವ ಟೀಕೆಗಳಿಗೆ ತಿರುಗೇಟು ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ ಅವರು ಕಿಡ್ನಾಪ್ ಪ್ರಕರಣದಲ್ಲಿ ರಕ್ಷಣೆ ಮಾಡಿರುವ ಆ ಮಹಿಳೆಯನ್ನು ಎಲ್ಲಿ ಇಟ್ಟಿದ್ದೀರಿ ಎಂದು ಪ್ರಶ್ನಿಸಿದರು.

ಕೆಲವೇ ತಿಂಗಳಲ್ಲಿ ರಾಜ್ಯ ಸರ್ಕಾರ ಧ್ವಂಸ: ಕೆಲವೇ ತಿಂಗಳಲ್ಲಿ ರಾಜ್ಯ ಸರ್ಕಾರ ಧ್ವಂಸವಾಗಲಿದೆ. ಇದನ್ನು ನಾನು ಸುಮ್ಮನೆ ಹೇಳುತ್ತಿಲ್ಲ. ಹಾಸನಾಂಬೆ ಮೇಲೆ ಪ್ರಮಾಣ ಮಾಡಲು ಹೇಳುತ್ತಾರೆ. ಕೃಷ್ಣ ಬೈರೇಗೌಡ ಅವರು ಬರಬೇಕು. ಅವರ ನಾಯಕರನ್ನು ಕರೆದು ಕೊಂಡು ಬರಲಿ. ಕೆಲವೇ ತಿಂಗಳಲ್ಲಿ ಈ ಸರ್ಕಾರ ಧ್ವಂಸ ಆಗಲಿದ್ದು, ಹಾಸನಾಂಬೆ ಇದನ್ನು ಮಾಡುತ್ತಾಳೆ ಎಂದು ಕಿಡಿಕಾರಿದರು.

ಇವತ್ತು ಕೂಡ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನರನ್ನು ಕರೆದುಕೊಂಡು ಬಂದಿದ್ದೀರಿ. ಜಾಮೀನು ಪಡೆಯಲು ಹೋದ ವಕೀಲರನ್ನು ಕರೆದುಕೊಂಡು ಬಂದಿದ್ದೀರಾ? ಕಿಡ್ನಾಪ್ ಗೆ ಒಳಪಟ್ಟರೆನ್ನಲಾದ ಹೆಣ್ಣುಮಗಳನ್ನು ಕರೆದುಕೊಂಡು ಬಂದಿದ್ದೀರಿ. ಅವರಿಂದ ಏನು ಹೇಳಿಕೆ ಪಡೆದಿದ್ದೀರಿ? ಎಲ್ಲಿಂದ ಆಕೆಯನ್ನು ಕರೆದುಕೊಂಡು ಬಂದಿದ್ದೀರಿ? ಎಂದು ನೇರ ಪ್ರಶ್ನೆಗಳನ್ನು ಕೇಳಿದರು.

ಪೆನ್ ಡ್ರೈವ್ ಹಂಚಿದ್ದನ್ನು ಸಚಿವರು ಸಮರ್ಥಿಸುತ್ತಾರಾ?: ಪ್ರಪಂಚದಲ್ಲಿಯೇ ಅತಿ ದೊಡ್ಡ ಲೈಂಗಿಕ ಹಗರಣ ಎಂದು ಹೇಳುತ್ತಿರುವ ಕೃಷ್ಣ ಬೈರೇಗೌಡರಿಗೆ, ಅಷ್ಟು ದೊಡ್ಡದಾದ ಲೈಂಗಿಕ ಹಗರಣದಲ್ಲಿ ನೊಂದ ಮಹಿಳೆಯರ ಅಶ್ಲೀಲ ದೃಶ್ಯಗಳನ್ನು ಪೆನ್‌ ಡ್ರೈವ್‌ ಗಳಲ್ಲಿ ತುಂಬಿಸಿ ಹಾದಿ ಬೀದಿಯಲ್ಲಿ ಹಂಚಬಾರದು ಎನ್ನುವುದು ಗೊತ್ತಿರಲಿಲ್ಲವೇ? ವಿದೇಶದಲ್ಲಿ ಓದಿಕೊಂಡು ಬಂದ ಅವರಿಗೆ ಇಷ್ಟು ಸಾಮಾನ್ಯ ತಿಳಿವಳಿಕೆ ಇಲ್ಲವೇ? ಪೆನ್ ಡ್ರೈವ್ ಗಳನ್ನು ಹಂಚಿದ್ದನ್ನು ಅವರು ಸಮರ್ಥನೆ ಮಾಡುತ್ತಾರೆಯೇ? ಎಂದು ಮಾಜಿ ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು.

ಸಚಿವರಿಗೆ ನಾನೇ ಟಾರ್ಗೆಟ್: ಒಕ್ಕಲಿಗ ಸಚಿವರು, ಸಂಸದರು, ಶಾಸಕರು ನನ್ನ ವಿರುದ್ಧ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಅವರ ಉದ್ದೇಶ ಇರುವುದು ನೊಂದವರಿಗೆ ನ್ಯಾಯ ಕೊಡಿಸುವುದಲ್ಲ. ನನ್ನ ವಿರುದ್ಧ ದಾಳಿ ಮಾಡುವುದಷ್ಟೇ ಅವರ ಗುರಿ. ಅವರು ಪೆನ್ ಡ್ರೈವ್ ಗಳನ್ನು ಹಂಚಿಕೆ ಮಾಡಿದ ತಮ್ಮ ಪಕ್ಷದ, ಸರಕಾರದ ʼಖಳನಾಯಕʼನನ್ನು ರಕ್ಷಣೆ ಮಾಡಿಕೊಳ್ಳಲು ಜಾತಿ ಅಸ್ತ್ರ ಬಳಕೆ ಮಾಡಿದ್ದಾರೆ. ನಾನು ಅಂತಹ ಕೆಲಸ ಮಾಡಲ್ಲ. ಇಲ್ಲಿ ನಾನು ಜಾತಿಯನ್ನು ಎಳೆದು ತರುವುದಿಲ್ಲ. ಏಕಾಂಗಿಯಾಗಿ ಇದೆಲ್ಲವನ್ನೂ ಎದುರಿಸುತ್ತೇನೆ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.

ತನಿಖೆಯನ್ನು ದೃಶ್ಯಂ ಸಿನಿಮಾಗೆ ಹೋಲಿಸಿದ ಹೆಚ್​​ಡಿಕೆ:ಪೆನ್ ಡ್ರೈವ್ ವಿಚಾರವನ್ನು ನನ್ನ ತಲೆಗೆ ಕಟ್ಟಲು ಹೊರಟಿದ್ದೀರಿ. ನಾನೇ ಪ್ರೊಡ್ಯೂಸರ್, ಡೈರೆಕ್ಟರ್, ಕಥಾನಾಯಕ ಎಂದೆಲ್ಲಾ ಹೇಳತ್ತಿದ್ದೀರಿ. ನಾನು ಸಿನಿಮಾ ನಿರ್ಮಾಣ ಮಾಡಿದ್ದೇನೆ, ಆದರೆ ಆಕ್ಟಿಂಗ್ ಮಾಡಿಲ್ಲ ಅಷ್ಟೇ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟರು.

ಈ ಘಟನೆಗೆ ನನ್ನನ್ನು ಕಥಾನಾಯಕ ಮಾಡಲು ಹೊರಟಿದ್ದೀರಿ ಅಲ್ಲವೇ? ಹಲವಾರು ಸಿನಿಮಾಗಳ ಕಥೆಗಳನ್ನು ನೋಡಿದ್ದೇನೆ, ಕೇಳಿದ್ದೇನೆ. ಅಂತಹ ಸಿನಿಮಾಗಳೇ ಹಿಟ್ ಆಗಿ ಬಿಡುತ್ತಿವೆ. ಕನ್ನಡದಲ್ಲಿ ʼಉತ್ಕರ್ಷʼ, ಮಲೆಯಾಳಂ ರೀಮೇಕ್ ನ ʼದೃಶ್ಯಂʼ ನಂತಹ ಸಿನಿಮಾಗಳು ಬಂದಿರುವುದನ್ನು ನೋಡಿದ್ದೇವೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಸರಕಾರದ ವರಸೆ ನೋಡಿದರೆ ನನಗೆ ಆ ಸಿನಿಮಾಗಳು ನೆನಪಿಗೆ ಬರುತ್ತಿವೆ ಎಂದು ಕುಟುಕಿದರು.

ತಲೆ ಮರೆಸಿಕೊಂಡಿರುವ ಆ ಚಾಲಕನನ್ನು ಮೊದಲು ಹಿಡಿದು ವಿಚಾರಣೆ ನಡೆಸಿ. ಎಲ್ಲಾ ಕಥೆಗಳು ಹೊರಗೆ ಬರುತ್ತವೆ. ಮನೆಮನೆಗೆ ಹೋಗಿ ದೂರು ಕೊಡಿ ಅಂತ ಒತ್ತಾಯ ಮಾಡುವ ಅವಶ್ಯಕತೆ ಇಲ್ಲ. ಕೆ ಆರ್ ನಗರದಿಂದ ಹುಡುಕಿ ಹುಡುಕಿ ಕರೆದುಕೊಂಡು ಬರ್ತಾ ಇದ್ದೀರಲ್ಲ? ಹಾಸನ, ಹೊಳೆನರಸೀಪುರದಲ್ಲಿ ಯಾರೂ ಇಲ್ವಾ? ಯಾಕೆ ಇವತ್ತು ಕೇಂದ್ರ ಮಹಿಳಾ ಆಯೋಗಕ್ಕೆ ದೂರು ಕೊಟ್ಟಿದ್ದಾರೆ ಎಂದು ಅವರು ಕಿಡಿಕಾರಿದರು.

ಮಹಿಳಾ ಆಯೋಗದ ಅಧ್ಯಕ್ಷರು ಸಿಎಂಗೆ ಪತ್ರ ಬರೆಯುತ್ತಾರೆ. ಮಹಿಳೆಯರ ಮಾನಹರಣ ಪ್ರಕರಣ ನಾಲ್ಕು ಗೋಡೆಗಳ ನಡುವೆ ಇತ್ತು. ಅದನ್ನು ವಿಶ್ವಕ್ಕೆ ಗೊತ್ತಾಗುವಂತೆ ಮಾಡಿದ್ದು ಯಾರು? ಅವತ್ತು ನವೀನ್ ಗೌಡ ಎಂಬ ಕಿಡಿಗೇಡಿ ಇನ್ನೇನು ಅಶ್ಲೀಲ ವಿಡಿಯೋ ಬರುತ್ತದೆ, ಕಮಿಂಗ್ ಸೂನ್ ಎಂದು ಪೋಸ್ಟ್ ಹಾಕುತ್ತಾನೆ. ಎಂಟು ಗಂಟೆಗೆ ರಿಲೀಸ್ ಆಗುತ್ತೆ ಅಂತ ಬರೆದಿದ್ದ. ಇವತ್ತಿನವರೆಗೆ ಅವನ ಮೇಲೆ ಕ್ರಮ ಕೈಗೊಂಡಿದ್ದೀರಾ? ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ದೇವೇಗೌಡರಿಗೆ ನಾಲ್ವರು ಗಂಡು ಮಕ್ಕಳು, ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. ನಮ್ಮ ನಮ್ಮ ವ್ಯವಹಾರ, ಸಂಸಾರ ನಮ್ಮದು. ನಾನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾತ್ರ ಹಾಸನ ರಾಜಕಾರಣದಲ್ಲಿ ಪ್ರವೇಶ ಮಾಡಿದ್ದೆ. ಒಬ್ಬ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುತ್ತೇನೆ ಎಂದಿದ್ದೆ. ಆ ಮಾತಿನ ಪ್ರಕಾರ ನಡೆದುಕೊಂಡೆ. ನಾನು ರೇವಣ್ಣ ಅವರ ಕುಟುಂಬವನ್ನು ರಾಜಕಾರಣದಲ್ಲಿ ಮುಗಿಸಲು ಹೊರಟಿದ್ದೇನೆ ಅಂತೆಲ್ಲಾ ಮಾತನಾಡಿದ್ದಾರೆ ಇವರು. ನಾಚಿಕೆ ಆಗಬೇಕು ಇವರಿಗೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಪೆನ್ ಡ್ರೈವ್ ಗಳಿಗೆ ಎಷ್ಟು ಖರ್ಚು ಮಾಡಿದ್ದೀರಿ? :ದೇವರಾಜೇಗೌಡ ಮತ್ತು ಕುಮಾರಸ್ವಾಮಿ ಭೇಟಿ ಮಾಡಿದ್ದರು. ಅವರೇ ಈ‌ ಕಥೆ ಹೆಣೆದಿದ್ದಾರೆ ಅಂತೆಲ್ಲಾ ಹೇಳ್ತಾ ಇದೀರಲ್ಲ? 26ನೇ ತಾರೀಖಿಗೆ ಮೊದಲು ಈ ಪೆನ್ ಡ್ರೈವ್ ಗಳಿಗೆ ಎಷ್ಟು ಖರ್ಚು ಮಾಡಿದ್ದೀರಿ? ಕುಮಾರಸ್ವಾಮಿ ಜೇಬಲ್ಲಿ ಪೆನ್ ಡ್ರೈವ್ ಇದೆ ಅಂತಾ ಸುಮ್ನೆ ತೋರಿಸ್ತಾ ಇರ್ತೀರಾ ಅಂತೀರಲ್ಲ. ನಾನು ಇಂತ ಪೆನ್ ಡ್ರೈವ್ ತಯಾರು ಮಾಡೋನಲ್ಲ. ನಿಮ್ಮ ಸರ್ಕಾರದ ಭ್ರಷ್ಟಾಚಾರದ ಪೆನ್ ಡ್ರೈವ್ ನನ್ನ ಬಳಿ ಇರೋದು. ಸ್ಪೀಕರ್ ಕ್ರಮ ತಗೊಳ್ತೀನಿ ಅಂತಾ ಭರವಸೆ ಕೊಟ್ರೆ, ಅದನ್ನು ಬಿಡುಗಡೆ ಮಾಡ್ತೀನಿ ಎಂದು ಸವಾಲ್​ ಕೂಡಾ ಹಾಕಿದರು.

ಇದನ್ನೂಓದಿ:ಮಹಿಳೆ ಅಪಹರಣ ಪ್ರಕರಣ: ಹೆಚ್.ಡಿ. ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ - H D Revanna Case

Last Updated : May 9, 2024, 11:06 PM IST

ABOUT THE AUTHOR

...view details