ಬೆಂಗಳೂರು : ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್ಡ್ರೈವ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದೆ. ಹೆಚ್. ಡಿ. ರೇವಣ್ಣ ಅವರ ವಿರುದ್ಧದ ನನ್ನ ಹೋರಾಟವನ್ನ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ ತನ್ನ ಅಸ್ತ್ರವಾಗಿ ಬಳಸುತ್ತಿದೆ ಎಂದು ವಕೀಲ ದೇವರಾಜೇಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.
ಪ್ರೆಸ್ ಕ್ಲಬ್‌ನಲ್ಲಿ ಇಂದು ತುರ್ತು ಪತ್ರಿಕಾಗೋಷ್ಠಿ ಕರೆದ ದೇವರಾಜೇಗೌಡ, 'ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್‌ನ ನಾಯಕರಿಗೆ ರೇವಣ್ಣ ವಿಚಾರ ಬೇಕಿರಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಜಾತ್ಯತೀತ ಜನತಾದಳ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ ಹಾಗೂ ನೇರವಾಗಿ ನರೇಂದ್ರ ಮೋದಿ ಅವರು ಇಂಥವರಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ರಾಷ್ಟ್ರಮಟ್ಟದಲ್ಲಿ ಪ್ರಚಾರ ಮಾಡುವುದು ಬೇಕಾಗಿತ್ತು. ಇದಕ್ಕಾಗಿ ಡಿ. ಕೆ ಶಿವಕುಮಾರ್ ಅವರು ಎಲ್. ಆರ್ ಶಿವರಾಮೇಗೌಡರನ್ನ ಕಳುಹಿಸಿ ನನ್ನನ್ನ ಅವರೊಂದಿಗೆ ಕೈಜೋಡಿಸಲು ಕೇಳಿಕೊಂಡಿದ್ದರು' ಎಂದು ನೇರವಾಗಿ ಆರೋಪಿಸಿದ್ದಾರೆ.
ಎಲ್. ಆರ್ ಶಿವರಾಮೇಗೌಡ ಮಧ್ಯಸ್ಥಿಕೆಯಲ್ಲಿ ಡಿ. ಕೆ ಶಿವಕುಮಾರ್ ಅವರು ನನ್ನನ್ನ ಸಂಪರ್ಕಿಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಅಧಿಕಾರಕ್ಕೆ ತಂದಂತೆಯೇ ರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರಲು , ನೀವು ನಮ್ಮ ಜೊತೆ ಬಾ, ನಮ್ಮೊಂದಿಗೆ ಕೈಜೋಡಿಸಿದರೆ ನಿನಗೆ ಎಲ್ಲ ರೀತಿಯ ಸಹಕಾರ ಮಾಡುತ್ತೇವೆ ಅಂತಾ ಕರೆದಿದ್ದಾರೆ ಎಂದು ವಕೀಲ ದೇವರಾಜೇಗೌಡ ಹೇಳಿದರು. ಈ ವಿಚಾರವನ್ನು ಎಲ್. ಆರ್ ಶಿವರಾಮೇಗೌಡ ಅವರೇ ಹೇಳಿದ್ದಾರೆ ಎಂಬುದಕ್ಕೆ ಪೂರಕವಾದ ಫೋನ್ ಸಂಭಾಷಣೆಯ ಆಡಿಯೋ ತುಣುಕನ್ನ ಇದೇ ಸಂದರ್ಭದಲ್ಲಿ ಅವರು ಬಿಡುಗಡೆಗೊಳಿಸಿದ್ದಾರೆ.