ಕರ್ನಾಟಕ

karnataka

ETV Bharat / state

SSLC ಪರೀಕ್ಷೆ-2ಕ್ಕೆ ವಿಶೇಷ ತರಗತಿ ನಡೆಸುವ ಶಿಕ್ಷಕರಿಗೆ ಹೆಚ್ಚುವರಿ ಗಳಿಕೆ ರಜೆ ಸೌಲಭ್ಯ - Earning Leave For Teachers - EARNING LEAVE FOR TEACHERS

ಎಸ್ಎಸ್ಎಲ್​ಸಿ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಸಂದರ್ಭದಲ್ಲಿ ನಡೆಸುವ ಪರೀಕ್ಷೆ-2ರಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರಿಗೆ ಹೆಚ್ಚುವರಿ ಗಳಿಕೆ ರಜೆ ಸೌಲಭ್ಯ ನೀಡಲಾಗುತ್ತಿದೆ.

sslc exam 2
ಸಂಗ್ರಹ ಚಿತ್ರ (ETV Bharat)

By ETV Bharat Karnataka Team

Published : May 17, 2024, 12:53 PM IST

ಬೆಂಗಳೂರು:2023-24ನೇ ಸಾಲಿನಿಂದ ಎಸ್ಎಸ್ಎಲ್​ಸಿ ಮತ್ತು ದ್ವಿತೀಯ ಪಿಯುಸಿಗೆ ಮೂರು ವಾರ್ಷಿಕ ಪರೀಕ್ಷಾ ಪದ್ಧತಿ ಜಾರಿಗೊಳಿಸಿದ್ದು, ಬೇಸಿಗೆ ರಜೆಯಲ್ಲಿ ಹೆಚ್ಚುವರಿ ಪರೀಕ್ಷೆ ಸಂಬಂಧ ಕಾರ್ಯ ನಡೆಸುವ ಶಿಕ್ಷಕರಿಗೆ ಹೆಚ್ಚುವರಿ ಗಳಿಕೆ ರಜೆ ಸೌಲಭ್ಯದ ಮೂಲಕ ರಜೆ ಕಡಿತಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಸರ್ಕಾರ ಆದೇಶ ಹೊರಡಿಸಿದೆ.

ಜೂನ್‌ 7 ರಿಂದ 14 ರವರೆಗೆ ನಡೆಯುವ ಎಸ್ಎಸ್ಎಲ್​ಸಿ ಪರೀಕ್ಷೆ -2ಕ್ಕೆ ನೋಂದಾಯಿಸುವ ವಿದ್ಯಾರ್ಥಿಗಳಿಗೆ ಮೇ 15 ರಿಂದ ಜೂನ್‌ 5 ರವರೆಗೆ ವಿಶೇಷ ತರಗತಿಗಳನ್ನು ಆರಂಭಿಸಲಾಗಿದೆ. ಬೇಸಿಗೆ ರಜೆಯಲ್ಲಿ ಕೆಲಸ ಮಾಡುವುದರಿಂದ ಸರ್ಕಾರಿ ಹಾಗೂ ಅನುದಾನಿತ ಶಾಲಾ ಶಿಕ್ಷಕರಿಗೆ ಕಡಿತವಾಗುವ ಬೇಸಿಗೆ ರಜಾ ದಿನಗಳಿಗೆ ಪರ್ಯಾಯವಾಗಿ ಗಳಿಕೆ ರಜೆ ನೀಡುವುದಾಗಿ ಸುತ್ತೋಲೆ ಹೊರಡಿಸಲಾಗಿದೆ. ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ವಿಶೇಷ ತರಗತಿಗಳನ್ನು ನಡೆಸಲು ಆಯಾ ಆಡಳಿತ ಮಂಡಳಿಗಳೇ ಅಗತ್ಯ ಕ್ರಮ ವಹಿಸಬೇಕೆಂದು ಇಲಾಖೆ ಸೂಚಿಸಿದೆ.

ವಿಶೇಷ ತರಗತಿ ನಡೆಸುವ ಸೂಚನೆ ನೀಡುತ್ತಿದ್ದಂತೆ ಶಿಕ್ಷಕ ವರ್ಗ ಆಕ್ರೋಶ ವ್ಯಕ್ತಪಡಿಸಿತ್ತು. ಮೇ 29 ರವರೆಗೂ ರಜೆ ಇದೆ, ಆದರೆ ವಿಶೇಷ ತರಗತಿ ಕಾರಣಕ್ಕೆ 14 ದಿನ ಬೇಸಿಗೆ ರಜಾದಿನಗಳು ಕಡಿತಗೊಳ್ಳುವ ಹಿನ್ನೆಲೆಯಲ್ಲಿ ವಿಶೇಷ ತರಗತಿ ನಡೆಸಲು ವಿರೋಧ ವ್ಯಕ್ತಪಡಿಸಿದ್ದರು. ಶಿಕ್ಷಕರ ಸಂಘಟನೆಗಳೂ ಈ ಬಗ್ಗೆ ಶಿಕ್ಷಕರಿಗೆ ಬೆಂಬಲಿಸಿದ್ದವು. ಶಿಕ್ಷಕ ಸಮುದಾಯದಿಂದ ಅಸಮಾಧಾನ ಮುಂದುವರೆದಲ್ಲಿ ಆಗಬಹುದಾದ ಸಮಸ್ಯೆ ಊಹಿಸಿದ ಸರ್ಕಾರ, ತಕ್ಷಣವೇ ಹೆಚ್ಚುವರಿ ಗಳಿಕೆ ರಜೆಗೆ ಅವಕಾಶ ನೀಡಿ ಮನವೊಲಿಸಲು ಮುಂದಾಗಿದೆ.

ವಿಶೇಷ ತರಗತಿಗಳಿಗೆ ಆಯಾ ಶಾಲೆಗಳ ಮುಖ್ಯ ಶಿಕ್ಷಕರೇ ವೇಳಾಪಟ್ಟಿ ಸಿದ್ಧಪಡಿಸಬೇಕು. ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಕಲ್ಪಿಸಬೇಕು. ಯಾವುದೇ ಶಾಲೆಯಲ್ಲಿ ವಿಷಯ ಶಿಕ್ಷಕರು ಇಲ್ಲದಿದ್ದರೆ, ತಾಲೂಕಿನ ಇತರೆ ಸಮೀಪದ ಶಾಲೆಯಿಂದ ಶಿಕ್ಷಕರನ್ನು ನಿಯೋಜಿಸಬಹುದು. ಇಡೀ ತಾಲೂಕಲ್ಲಿ ವಿಷಯ ಶಿಕ್ಷಕರು ಇಲ್ಲದಿದ್ದರೆ, ಅತಿಥಿ ಶಿಕ್ಷಕರನ್ನು ಬಿಇಒ ನೇಮಿಸಬೇಕು ಎಂಬುದು ಸೇರಿದಂತೆ ಒಟ್ಟು 18 ಅಂಶಗಳ ವಿವರವಾದ ಸುತ್ತೋಲೆ ಹೊರಡಿಸಲಾಗಿದೆ.

ಇದನ್ನೂ ಓದಿ:ಎಸ್ಎಸ್ಎಲ್​ಸಿ ಪರೀಕ್ಷೆ-2ಗೆ ನೋಂದಣಿ ದಿನಾಂಕ ಮೇ 19ರ ವರೆಗೆ ವಿಸ್ತರಣೆ - Karnataka School Examination board

ABOUT THE AUTHOR

...view details