ತೆಲುಗು ನಟಿ ಹೇಮಾಗೆ 14 ದಿನ ನ್ಯಾಯಾಂಗ ಬಂಧನ (ETV Bharat) ಬೆಂಗಳೂರು: ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿಗೆ ಆಯೋಜಿಸಿದ್ದ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಆರೋಪದಡಿ ಇಂದು ವಿಚಾರಣೆಗೆ ಹಾಜರಾಗಿದ್ದ ತೆಲುಗು ನಟಿ ಹೇಮಾ ಅವರನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿ ಬಳಿಕ ವೈದ್ಯಕೀಯ ಪರೀಕ್ಷೆ ಮಾಡಿಸಿ ಕೋರ್ಟ್ಗೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನಾಲ್ಕನೇ ಅಪರ ಸಿವಿಲ್ ನ್ಯಾಯಾಧೀಶರು, ನಟಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದಾರೆ.
ಕೋರ್ಟ್ಗೆ ಹಾಜರುಪಡಿಸುವ ವೇಳೆ ಪೊಲೀಸರ ವಿರುದ್ಧ ಹೇಮಾ ಆಕ್ರೋಶ ವ್ಯಕ್ತಪಡಿಸಿದರು. "ನಾನು ಏನೂ ತಪ್ಪು ಮಾಡಿಲ್ಲ. ಬರ್ತ್ ಡೇ ಪಾರ್ಟಿ ಕೇಕ್ ಕಟಿಂಗ್ ಮುಗಿಸಿ ಹೊರಟು ಹೋಗಿದ್ದೆ. ಅಂದು ನನಗೆ ಯಾವುದೇ ಟೆಸ್ಟ್ ಮಾಡಿರಲಿಲ್ಲ. ಡ್ರಗ್ಸ್ ಪಾಸಿಟಿವ್ ಕೂಡ ಬಂದಿಲ್ಲ. ಎಲ್ಲ ಟೆಸ್ಟ್ಗಳನ್ನು ಇಂದು ಮಾಡಿದ್ದಾರೆ. ನನ್ನದು ಯಾವುದೇ ತಪ್ಪಿಲ್ಲ" ಎಂದು ಕೋರ್ಟ್ಗೆ ಹಾಜರುಪಡಿಸಲು ಕರೆತರುವ ವೇಳೆ ಹೇಮಾ ಹೇಳಿದರು.
ಈ ಮೊದಲು ಅನಾರೋಗ್ಯ ಹಿನ್ನೆಲೆಯಲ್ಲಿ ವಿಚಾರಣೆಗೆ ಒಂದು ವಾರ ಸಮಯಾವಕಾಶ ನೀಡುವಂತೆ ಹೇಮಾ, ಸಿಸಿಬಿ ಪೊಲೀಸರಲ್ಲಿ ಮನವಿ ಮಾಡಿದ್ದರು. ಹೀಗಾಗಿ ಜೂ.1ರಂದು ಹಾಜರಾಗುವಂತೆ ಎರಡನೇ ನೋಟಿಸ್ ಜಾರಿ ಮಾಡಲಾಗಿತ್ತು. ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಮೂರನೇ ನೋಟಿಸ್ ನೀಡಿದ ಪರಿಣಾಮ ಇಂದು ತನಿಖಾಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಆ ಬಳಿಕ ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಪೊಲೀಸರು ನಟಿಯನ್ನು ಬಂಧಿಸಿದರು.
ನಟಿಯನ್ನು ಬಂಧಿಸಿದ್ದೇಕೆ?: ವಿಚಾರಣೆ ವೇಳೆ ತಮ್ಮ ಮೇಲಿನ ಆರೋಪಗಳಿಗೆ ಸಮರ್ಪಕ ಉತ್ತರ ನೀಡಲಿಲ್ಲ. ರೇವ್ ಪಾರ್ಟಿ ಆಯೋಜನೆಯಲ್ಲಿ ನಟಿಯ ಪಾತ್ರ ಪ್ರಮುಖವಾಗಿತ್ತು. ಅಲ್ಲದೆ, ಡ್ರಗ್ಸ್ ಸೇವಿಸಿಲ್ಲ ಎಂದು ವಿಡಿಯೋ ಮಾಡಿ ಪೊಲೀಸರ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದರಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೇವ್ ಪಾರ್ಟಿಗೆ ಡ್ರಗ್ಸ್ ಸರಬರಾಜು ಮಾಡಿದ್ದ ಡಿ.ಜೆ.ಹಳ್ಳಿ ನಿವಾಸಿ ಇಮಾರ್ ಶರೀಫ್ ಆರೋಪಿಯನ್ನು ಬಂಧಿಸಲಾಗಿದೆ. ಪಾರ್ಟಿಗೆ ಡ್ರಗ್ಸ್ ಸಹಿತ ಬರುವಂತೆ ಶರೀಫ್‌ಗೆ ತಿಳಿಸಲಾಗಿತ್ತು. ಅದರಂತೆ ವಿವಿಧ ಮಾದರಿಯ ಡ್ರಗ್ಸ್ ತೆಗೆದುಕೊಂಡು ಪಾರ್ಟಿಗೆ ಬಂದಿದ್ದ. ಪಾರ್ಟಿಯಲ್ಲಿ ಆಯೋಜಕರ ಮೂಲಕ ಡ್ರಗ್ಸ್ ನೀಡಲಾಗಿತ್ತು. ಆರೋಪಿ ಶರೀಫ್ ಬಳಿ 40 ಎಂಡಿಎಂಎ ಮಾತ್ರೆಗಳು ಪತ್ತೆಯಾಗಿತ್ತು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ರೇವ್ ಪಾರ್ಟಿ ಜೊತೆ ಡ್ರಗ್ಸ್ ಸೇವನೆ ಅಕ್ರಮ ಎಂದು ತಿಳಿದಿದ್ದರೂ ಉದ್ದೇಶಪೂರ್ವಕವಾಗಿ ಪಾರ್ಟಿ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಹೇಮಾ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಫಾರ್ಮ್‌ಹೌಸ್‌ನಲ್ಲಿ ಡ್ರಗ್ಸ್ ಪಾರ್ಟಿ: ನಗರದ ಹೊರವಲಯದಲ್ಲಿರುವ ಜಿ.ಎಂ.ಫಾರ್ಮ್ ಹೌಸ್ನಲ್ಲಿ ಹುಟ್ಟುಹಬ್ಬದ ಹೆಸರಲ್ಲಿ ಆಯೋಜಿಸಿದ್ದ ರೇವ್ ಪಾರ್ಟಿಯಲ್ಲಿ ಸುಮಾರು 250ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಆಂಧ್ರ ಮೂಲದ ನಟಿಯರು, ಉದ್ಯಮಿಗಳು ಸೇರಿದಂತೆ ಅನೇಕರಿದ್ದರು. ಪಾರ್ಟಿಯಲ್ಲಿ ಡ್ರಗ್ಸ್ ಬಳಕೆ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಸಿಸಿಬಿ, 6 ಮಂದಿಯನ್ನು ಬಂಧಿಸಿತ್ತು. ಪಾರ್ಟಿಯಲ್ಲಿ ಭಾಗಿಯಾಗಿದ್ದವರ ಪೈಕಿ 86 ಮಂದಿ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿತ್ತು. ಹೇಮಾ ಸಹ ಡ್ರಗ್ಸ್ ಸೇವಿಸಿದ್ದು ದೃಢಪಟ್ಟಿತ್ತು.
ವಿಡಿಯೋ ಮಾಡಿ ನಟಿ ಹೈಡ್ರಾಮಾ: ಆದರೆ ತಾನು ಪಾರ್ಟಿಯಲ್ಲಿ ಇರಲಿಲ್ಲ ಎಂದು ನಟಿ ವಿಡಿಯೋ ಮಾಡಿ ಹೈಡ್ರಾಮಾ ಮಾಡಿದ್ದರು. ಬಂಧಿತರಾಗಿದ್ದ ವಾಸು, ಅರುಣ್, ಸಿದ್ದಿಕ್, ರಣದೀರ್ ಹಾಗೂ ರಾಜ್ ಭಾವ ಅವರ ವಿಚಾರಣೆ ವೇಳೆ ಹೇಮಾ ಸಹ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ವಿಷಯ ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: ಬೆಂಗಳೂರು ರೇವ್ ಪಾರ್ಟಿ ಕೇಸ್: ತೆಲುಗು ನಟಿಯ ಬೆಂಬಲಕ್ಕೆ ನಿಂತ ಟಾಲಿವುಡ್ ಸೂಪರ್ ಸ್ಟಾರ್ - Vishnu Manchu On Rave Party