ಬೆಂಗಳೂರು:ಕನ್ನಡ ಚಿತ್ರರಂಗದ ಹಿರಿಯ ನಟಿ, ದಿವಂಗತ ಲೀಲಾವತಿ ಅವರ ಪುತ್ರ ನಟ ವಿನೋದ್ ರಾಜ್ ಆರೋಗ್ಯದಲ್ಲಿ ಏರುಪೇರಾಗಿದ್ದು, ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಕರುಳಿನ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.
ವಿನೋದ್ ರಾಜ್ ಅವರು ಹೃದಯ ಸಂಬಂಧಿ ಸಮಸ್ಯೆಯಿಂದಾಗಿ 11 ವರ್ಷಗಳ ಹಿಂದೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆ ಸಂದರ್ಭದಲ್ಲಿ ಸ್ಟೆಂಟ್ ಹಾಕಲಾಗಿತ್ತು. ಈ ಸ್ಟೆಂಟ್‌ನಿಂದ ಕರುಳಿನ ಸಮಸ್ಯೆ ಉದ್ಭವಿಸಿ ಬಳಲುತ್ತಿದ್ದರು.
ಇನ್ನೆರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲೀಲಾವತಿ ತಮ್ಮ ಕೊನೆಯ ದಿನಗಳಲ್ಲಿ ಚಿಕಿತ್ಸೆ ಪಡೆದಿದ್ದ ಆಸ್ಪತ್ರೆಯಲ್ಲೇ ವಿನೋದ್ ರಾಜ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿನೋದ್ ರಾಜ್ ಸಮಾಜಮುಖಿ ಕೆಲಸಗಳು: ಇತ್ತೀಚೆಗೆ ವಿನೋದ್ ರಾಜ್ ಸಮಾಜಮುಖಿ ಕೆಲಸಗಳ ಮೂಲಕ ಸುದ್ದಿಯಲ್ಲಿದ್ದರು. ನೆಲಮಂಗಲದ ಕರೆಕಲ್ ಕ್ರಾಸ್ನಿಂದ ಸೋಲದೇವನಹಳ್ಳಿವರೆಗೂ ರಸ್ತೆ ಗುಂಡಿಗಳನ್ನು ಮುಚ್ಚಿಸಿದ್ದರು. ಸರ್ಕಾರದ ಯಾವುದೇ ಅನುದಾನಕ್ಕೆ ಕಾಯದೇ ತಾವೇ ಸ್ವತಃ ಮುಂದೆ ನಿಂತು ತಮ್ಮ ಖರ್ಚಿನಲ್ಲೇ ರಸ್ತೆ ರಿಪೇರಿ ಮಾಡಿಸಿದ್ದರು.
ಇದನ್ನೂ ಓದಿ:ಸ್ವಂತ ಹಣ ವ್ಯಯಿಸಿ ರಸ್ತೆಗುಂಡಿ ಮುಚ್ಚಿಸಿದ ನಟ ವಿನೋದ್ ರಾಜ್ - ವಿಡಿಯೋ