ಗೃಹ ಸಚಿವ ಡಾ.ಜಿ.ಪರಮೇಶ್ವರ್ (ETV Bharat) ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಟ ದರ್ಶನ್ ಅವರಿಗೆ ಊಟ, ಉಪಚಾರ ವಿಚಾರದಲ್ಲಿ ಬೇರೆ ರೀತಿ ಆತಿಥ್ಯ ನೀಡಿಲ್ಲ. ಜೈಲಿನಲ್ಲಿರುವ ಎಲ್ಲರಂತೆಯೇ ದರ್ಶನ್ ಅವರಿಗೆ ವ್ಯವಸ್ಥೆ ಇದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಇಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದ ರಾಷ್ಟ್ರಪತಿಗಳ ಸುಧಾರಣಾ ಸೇವೆ ಪದಕ ಹಾಗೂ ಮುಖ್ಯಮಂತ್ರಿಗಳ ಪದಕ ಪ್ರಧಾನ ಮತ್ತು ಸನ್ನಡತೆಯ ಆಧಾರದ ಶಿಕ್ಷಾ ಬಂಧಿಗಳ ಅವಧಿಪೂರ್ವ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಅವರು ಮಾತನಾಡಿದರು.
ನಟ ದರ್ಶನ್ ಅವರಿಗೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದೆ ಎಂಬ ಆರೋಪದ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಊಟ, ಉಪಚಾರದ ವಿಚಾರದಲ್ಲೂ ಯಾವುದೇ ಆದ್ಯತೆ ನೀಡಲ್ಲ. ಬೇರೆಯವರೆಗೆ ಏನು ಊಟ ಕೊಡಲಾಗುತ್ತದೋ, ಅದೇ ಊಟವನ್ನು ಅವರಿಗೂ ಕೊಡುತ್ತಾರೆ. ನನಗೆ ಗೊತ್ತಿದೆ, ಬಿರಿಯಾನಿ ಕೊಟ್ಟರು, ಇನ್ನೇನು ಕೊಟ್ರು ಹೇಳಿದ್ದಾರೆ. ಆದರೆ, ಇದ್ಯಾವುದೂ ಕೂಡ ನಡೆಯಲ್ಲ ಎಂದು ಖಡಕ್ ಆಗಿ ತಿಳಿಸಿದರು.
ಇದೇ ವೇಳೆ, ದರ್ಶನ ಕುಟುಂಬಸ್ಥರ ವಾಹನಗಳಿಗೆ ನೇರವಾಗಿ ಜೈಲಿನ ಒಳಗೆ ಬಿಡಲಾಗುತ್ತದೆ ಎಂಬ ಆರೋಪದ ಬಗ್ಗೆಯೂ ಮಾತನಾಡಿದ ಅವರು, ಜೈಲಿನಲ್ಲಿ ನನಗೆ ನೇರವಾದ ಪ್ರವೇಶವಿಲ್ಲ. ವಾಹನಗಳು ಬಂದರೂ ಒಂದು ಹಂತಕ್ಕೆ ಬಂದಿರುತ್ತವೆ. ಅದಕ್ಕಿಂತ ಒಳಗೆ ಬಿಡುತ್ತಾರಾ?. ಗೇಟ್ವರೆಗೂ ಬಿಡುತ್ತಾರೆ. ಸೆಲೆಬ್ರಿಟಿಗಳಿಗೆ ಜನ ಮುತ್ತಿಕೊಳ್ಳುತ್ತಾರೆ ಅಂತಾ ಸುರಕ್ಷಿತ ದೃಷ್ಟಿಯಿಂದ ಒಂದು ಹಂತದವರಿಗೆ ಬಿಟ್ಟಿರುತ್ತಾರೆ. ಆದರೆ, ಯಾರಿಗೂ ವಿಶೇಷ ಆದ್ಯತೆ ಕೊಡುವುದಿಲ್ಲ ಎಂದು ಹೇಳಿದರು.
ಇದೇ ವೇಳೆ, ಕೆಳಹಂತದ ಅಧಿಕಾರಿಗಳು ಹಲವು ವರ್ಷಗಳಿಂದ ಠಿಕಾಣಿ ಹೂಡಿದ್ದಾರೆ. ಅಂತವರು ಅಕ್ರಮಗಳಿಗೆ ಕೈಜೋಡಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ, ಇದೆಲ್ಲವು ನನ್ನ ಗಮನಕ್ಕೆ ಇದೆ. ಬೇರೆಡೆ ವರ್ಗಾವಣೆಯಾದವರು ಮತ್ತೇ ಅದೇ ಸ್ಥಳಕ್ಕೆ ಮರು ವರ್ಗಾವಣೆಯಾಗಿಲ್ಲ. ನಾನೇ ವರ್ಗಾವಣೆ ಮಾಡುವುದರಿಂದ, ಅಂತಹ ಒಂದು ನಿದರ್ಶನವನ್ನು ತೋರಿಸಿ. ಇದು ಸಾಧ್ಯವೇ ಇಲ್ಲ. ಇಲಾಖೆಯಲ್ಲಿ ಮತ್ತಷ್ಟು ಸುಧಾರಣೆ ತರಲು ಕೆಲವು ನಿಯಮಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಸನ್ನಡತೆ: ಪರಪ್ಪನ ಅಗ್ರಹಾರ ಜೈಲಿನಿಂದ 77 ಕೈದಿಗಳ ಬಿಡುಗಡೆ