ಕರ್ನಾಟಕ

karnataka

ETV Bharat / state

ಪಿಸ್ತೂಲ್ ಮುಟ್ಟುಗೋಲು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ನಟ ದರ್ಶನ್ - DARSHAN GUN LICENSE CASE

ಪಿಸ್ತೂಲ್ ಪರವಾನಗಿ ಅಮಾನುತುಪಡಿಸಿ ಹೊರಡಿಸಿದ ಆದೇಶವನ್ನು ರದ್ದುಪಡಿಸುವಂತೆ ಕೋರಿ ನಟ ದರ್ಶನ್, ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದು, ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಾಗಿದೆ.

DARSHAN GUN LICENSE CASE
ಹೈಕೋರ್ಟ್ (ETV Bharat)

By ETV Bharat Karnataka Team

Published : Jan 28, 2025, 9:44 PM IST

ಬೆಂಗಳೂರು : ಈವರೆಗೂ ತನ್ನ ಬಳಿಯಿದ್ದ ಪರವಾನಗಿಯುತ ಪಿಸ್ತೂಲ್ ಮಟ್ಟುಗೋಲು ಹಾಕಿಕೊಂಡಿರುವ ಪೊಲೀಸರ ಕ್ರಮ ಪ್ರಶ್ನಿಸಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾದ ನಟ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ತನಗೆ ಈ ಹಿಂದೆ ಮಂಜೂರು ಮಾಡಲಾಗಿದ್ದ ಶಸ್ತ್ರಾಸ್ತ್ರ (ಪಿಸ್ತೂಲ್) ಪರವಾನಗಿ ಅಮಾನುತುಪಡಿಸಿ ಉಪ ಪೊಲೀಸ್ ಆಯುಕ್ತರು (ಆಡಳಿತ) ಹೊರಡಿಸಿದ ಆದೇಶ ರದ್ದುಪಡಿಸುವಂತೆ ಕೋರಿ ದರ್ಶನ್, ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಾಗಿದೆ.

ಸಮಾಜದಲ್ಲಿ ನಾನು ಹೊಂದಿರುವ ಸ್ಥಾನಮಾನ ಮತ್ತು ಅಪಾರ ಪ್ರಮಾಣದ ಅಭಿಮಾನಿ ಬಳಗವನ್ನು ಪರಿಗಣಿಸಿ ಈ ಹಿಂದೆ ನನಗೆ ಶಸ್ತ್ರಾಸ್ತ್ರ (ಪಿಸ್ತೂಲ್) ಹೊಂದಲು ಪೊಲೀಸ್ ಇಲಾಖೆ ಪರವಾನಗಿ ಮಂಜೂರು ಮಾಡಿತ್ತು. ಆದರೆ, ನನ್ನ ವಿರುದ್ಧ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಬಾಕಿಯಿರುವ ಹಿನ್ನೆಲೆಯಲ್ಲಿ ನಾನು ಪಿಸ್ತೂಲ್ ದುರುಪಯೋಗ ಮಾಡುವ ಆತಂಕವನ್ನು ಪೊಲೀಸರು ವ್ಯಕ್ತಪಡಿಸಿದರು. ಅದರ ಬೆನ್ನಲ್ಲೇ ನಾನು ಹೊಂದಿರುವ ಶಸ್ತ್ರಾಸ್ತ್ರ ಪರವಾನಗಿ ಏಕೆ ರದ್ದುಪಡಿಸಬಾರದು? ಎಂಬ ಬಗ್ಗೆ ವಿವರಣೆ ನೀಡಲು ಸೂಚಿಸಿ 2025ರ ಜ.7ರಂದು ನನಗೆ ಶೋಕಾಸ್ ನೋಟಿಸ್ ನೀಡಿದ್ದರು ಎಂದು ದರ್ಶನ್ ಅರ್ಜಿಯಲ್ಲಿ ವಿವರಿಸಿದ್ದಾರೆ.

ಜತೆಗೆ, ಆ ಶೋಕಾಸ್ ನೋಟಿಸ್‌ಗೆ ಜನವರಿ 13ರಂದು ನಾನು ಉತ್ತರಿಸಿ, ಪಿಸ್ತೂಲ್ ದುರುಪಯೋಗಪಡಿಸಿಕೊಳ್ಳುವ ಆರೋಪ ನಿರಾಕರಿಸಿದ್ದೆ. ನಾನು ಅಮಾಯಕನಾಗಿದ್ದು, ತನ್ನ ಮೇಲಿನ ಆರೋಪದಲ್ಲಿ ಹುರುಳಿಲ್ಲದ ಕಾರಣ ಪ್ರಕರಣದ ಸಾಕ್ಷಿಗಳನ್ನು ಬೆದರಿಸುವ ಪರಿಸ್ಥಿತಿ ಉದ್ಭವಿಸುವುದಿಲ್ಲ. ಹಾಗಾಗಿ, ಶೋಕ್‌ಸ್ ನೋಟಿಸ್ ಹಿಂಪಡೆಯುವಂತೆ ಮನವಿ ಮಾಡಿದ್ದೆ. ಜ.16ರಂದು ಮತ್ತೊಂದು ಪತ್ರ ಬರೆದು, ಪಿಸ್ತೂಲ್ ದುರುಪಯೋಗ ಮಾಡುವುದಿಲ್ಲ ಎಂದು ಭರವಸೆ ಸಹ ನೀಡಿದ್ದೆ ಎಂದು ಅರ್ಜಿಯಲ್ಲಿ ದರ್ಶನ್ ತಿಳಿಸಿದ್ದಾರೆ.

ಪಿಸ್ತೂಲ್ ಹಿಂದಿರುಗಿಸಲು ಮನವಿ: ನಾನು ಮನವಿ ಮಾಡಿದ ಹೊರತಾಗಿಯೂ ಅಪರಾಧ ಪ್ರಕರಣ ಬಾಕಿಯಿರುವ ಆಧಾರದ ಮೇಲೆ ನನ್ನ ಪಿಸ್ತೂಲ್ ಪರವಾನಗಿ ಅಮಾನತುಪಡಿಸಿ ಉಪ ಪೊಲೀಸ್ ಆಯುಕ್ತರು 2025ರ ಜ.16ರಂದು ಆದೇಶಿಸಿದ್ದಾರೆ. ಜ.20ರಂದು ಪಿಸ್ತೂಲ್ ಅನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಅವರ ಆದೇಶವು ಸಂಪೂರ್ಣವಾಗಿ ಏಪಕ್ಷೀಯ ಮತ್ತು ಕಾನೂನು ಬಾಹಿರ ಕ್ರಮವಾಗಿದೆ. ಕೇವಲ ನನಗೆ ಕಿರುಕುಳ ನೀಡುವ ಉದ್ದೇಶದಿಂದ ಈ ಆದೇಶ ಮಾಡಲಾಗಿದೆ. ಎಲ್ಲ ಕಾನೂನು ಪ್ರಕ್ರಿಯೆ ಪಾಲಿಸಿದ ನಂತರವೇ ಈ ಹಿಂದೆ ನನಗೆ ಶಸ್ತ್ರಾಸ್ತ್ರ ಪರವಾನಗಿ ನೀಡಲಾಗಿತ್ತು. ಆದ್ದರಿಂದ ಉಪ ಪೊಲೀಸ್ ಆಯುಕ್ತರ ಆದೇಶ ರದ್ದುಪಡಿಸಬೇಕು ಎಂದು ನ್ಯಾಯಾಲಯವನ್ನು ದರ್ಶನ್ ಕೋರಿದ್ದಾರೆ.

ABOUT THE AUTHOR

...view details