ಕರ್ನಾಟಕ

karnataka

ETV Bharat / state

ತನಿಖೆ ವೇಳೆ ಪೊಲೀಸರು ಜಪ್ತಿ ಮಾಡಿದ್ದ ಹಣ ಮರಳಿಸುವಂತೆ ಸೂಚಿಸಿ : ನ್ಯಾಯಾಲಯಕ್ಕೆ ದರ್ಶನ್ ಮನವಿ - ACTOR DARSHAN CASE

ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ವೇಳೆ ಪೊಲೀಸರು ಜಪ್ತಿ ಮಾಡಿದ ಹಣ ಪಡೆಯಲು ದರ್ಶನ್ ಮತ್ತು ಪ್ರದೂಷ್​ ಕೋರ್ಟ್​ ಮೆಟ್ಟಿಲೇರಿದ್ದಾರೆ.

ದರ್ಶನ್
ದರ್ಶನ್ (ETV Bharat)

By ETV Bharat Karnataka Team

Published : Jan 11, 2025, 3:47 PM IST

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ಸಂದರ್ಭದಲ್ಲಿ ಜಪ್ತಿ ಮಾಡಿರುವ ತಮ್ಮ ಹಣವನ್ನು ವಾಪಸ್ ನೀಡಲು ಸೂಚಿಸುವಂತೆ ಆರೋಪಿಗಳಾದ ದರ್ಶನ್ ಹಾಗೂ ಪ್ರದೋಷ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮೀ ಹಾಗೂ ಮತ್ತೋರ್ವ ಆರೋಪಿ ಪ್ರದೋಷ್ ಮನೆಯಲ್ಲಿದ್ದ 40.40 ಲಕ್ಷ ನಗದು ಹಣವನ್ನ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಜಪ್ತಿ ಮಾಡಿದ್ದರು.

ಪ್ರಸ್ತುತ ತುರ್ತು ಹಣದ ಅವಶ್ಯಕತೆಯಿದ್ದು, ಜಪ್ತಿ ಮಾಡಲಾದ ಹಣವನ್ನ ವಾಪಸ್ ನೀಡುವಂತೆ ಕೋರಿ 57ನೇ ಸೆಷನ್ಸ್ ನ್ಯಾಯಾಲಯಕ್ಕೆ ತಮ್ಮ ವಕೀಲರ ಮೂಲಕ ದರ್ಶನ್ ಹಾಗೂ ಪ್ರದೋಷ್ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿ ಬೆನ್ನಲ್ಲೇ ಆಕ್ಷೇಪಣೆ ಸಲ್ಲಿಸುವಂತೆ ಎಸ್‌ಪಿಪಿ ಅವರಿಗೆ ನ್ಯಾಯಾಲಯ ಸೂಚಿಸಿದೆ. ಮತ್ತೊಂದೆಡೆ ಪೊಲೀಸರು ಜಪ್ತಿ ಮಾಡಿರುವ ಹಣದ ಕುರಿತು ತನಿಖೆಯ ಅಗತ್ಯವಿದ್ದು, ತಮ್ಮ ವಶಕ್ಕೆ ನೀಡುವಂತೆ ಆದಾಯ ತೆರಿಗೆ ಇಲಾಖೆ ಅರ್ಜಿ ಸಲ್ಲಿಸಿದೆ. ಆದಾಯ ತೆರಿಗೆ ಇಲಾಖೆಯ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ದರ್ಶನ್ ಪರ ವಕೀಲರಿಗೆ ನ್ಯಾಯಾಲಯ ಸೂಚಿಸಿದೆ.

ಇಷ್ಟೊಂದು ಪ್ರಮಾಣದ ನಗದು ಹಣವನ್ನು ಮನೆಯಲ್ಲಿ ಇಟ್ಟುಕೊಂಡಿದ್ದು ಯಾಕೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದರ್ಶನ್ ಅವರನ್ನ ಈ ಮೊದಲು ಪ್ರಶ್ನಿಸಿದ್ದರು.

ನಿನ್ನೆ ಕೋರ್ಟ್​ಗೆ ಹಾಜರಾಗಿದ್ದ ಆರೋಪಿಗಳು :ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದರಿಂದ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಿಗಳು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಇನ್ನು, ಪ್ರತಿ ವಿಚಾರಣೆ ವೇಳೆ ಹಾಜರಾಗುವಂತೆ ಷರತ್ತು ವಿಧಿಸಿದ್ದ ಹಿನ್ನೆಲೆಯಲ್ಲಿ ಶುಕ್ರವಾರವಷ್ಟೇ ಆರೋಪಿಗಳು ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದ ಮುಂದೆ ಹಾಜರಾಗಿದ್ದರು.

ಈ ವೇಳೆ ನಟ ದರ್ಶನ್ ಅವರಿಗೆ ಜ. 12ರಿಂದ ಐದು ದಿನ ಮೈಸೂರಿಗೆ ತೆರಳಲು 57ನೇ ಸಿಸಿಹೆಚ್ ನ್ಯಾಯಾಲಯ ಅನುಮತಿ ನೀಡಿದೆ. ಜೊತೆಗೆ ದೇವಾಲಯಗಳಿಗೆ ತೆರಳಲು ಅನುಮತಿ ಕೋರಿ ಪವಿತ್ರಾ ಗೌಡ ಸಲ್ಲಿಸಿದ್ದ ಮನವಿಗೂ ನ್ಯಾಯಾಲಯ ಅನುಮತಿ ನೀಡಿದೆ. ಹಾಗೆಯೇ ವ್ಯವಹಾರಿಕ ಕೆಲಸಗಳ ನಿಮಿತ್ತ ದೆಹಲಿ, ಮುಂಬೈಗೆ ತೆರಳಲು ಅನುಮತಿ ನೀಡಿ ನ್ಯಾಯಾಲಯ ಶುಕ್ರವಾರ ಆದೇಶಿಸಿತ್ತು.

ಇದನ್ನೂ ಓದಿ:ದರ್ಶನ್ ಸೇರಿ ಎಲ್ಲ ಆರೋಪಿಗಳ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ

ಇನ್ನೊಂದೆಡೆ ಪ್ರಕರಣದ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ಬೆಂಗಳೂರು ಪೊಲೀಸರು ಈಗಾಗಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಪ್ರಕರಣದ ಹಿನ್ನೆಲೆ : ಕಳೆದ ವರ್ಷದ ಜೂನ್ 8ರಂದು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನ ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಿದ ಆರೋಪದಡಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹಂತ-ಹಂತವಾಗಿ 17 ಮಂದಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: ಕೋರ್ಟ್‌ನಲ್ಲಿ ದರ್ಶನ್, ಪವಿತ್ರಾ ಗೌಡ ಮುಖಾಮುಖಿ: ಮೈಸೂರಿಗೆ ತೆರಳಲು ಅನುಮತಿ ನೀಡಿದ ನ್ಯಾಯಾಲಯ

ABOUT THE AUTHOR

...view details