ಬೆಂಗಳೂರು:ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ಜುಲೈ 18ರವರೆಗೆ ವಿಸ್ತರಿಸಿ ಇಂದು ನಗರದ 24ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿತು.
ಪರಪ್ಪನ ಅಗ್ರಹಾರ ಹಾಗೂ ತುಮಕೂರು ಜೈಲಿನಲ್ಲಿರುವ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರುಪಡಿಸಲಾಯಿತು. ಸರ್ಕಾರ ಪರ ವಕೀಲರು ನ್ಯಾಯಾಂಗ ಅವಧಿಯನ್ನು ಮುಂದುವರೆಸಬೇಕೆಂದು ರಿಮ್ಯಾಂಡ್ ಅರ್ಜಿ ಸಲ್ಲಿಸಿದರು. ಇದೇ ವೇಳೆ, ದರ್ಶನ್, ಪವಿತ್ರಾ ಗೌಡ ಪರ ವಕೀಲರು ವಾದ ಮಂಡಿಸಿದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ನ್ಯಾಯಾಂಗ ಬಂಧನ ಅವಧಿಯನ್ನು ಮುಂದುವರೆಸಿತು.
ಆರೋಪಿಗಳ ಪರ ವಕೀಲ ರಂಗನಾಥ್ ರೆಡ್ಡಿ ಪ್ರತಿಕ್ರಿಯಿಸಿ, "ನ್ಯಾಯಾಲಯ ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು 14 ದಿನಗಳವರೆಗೆ ವಿಸ್ತರಿಸಿದೆ. ಸರ್ಕಾರಿ ಪರ ವಕೀಲರು ಇಲ್ಲಿಯವರೆಗೂ ನಡೆದ ತನಿಖೆಯ ರಿಮ್ಯಾಂಡ್ ಅರ್ಜಿ ಸಲ್ಲಿಸಿದ್ದಾರೆ" ಎಂದರು.
ಮುಂದುವರೆದು ಮಾತನಾಡಿ, "ನಾವು 17ನೇ ಆರೋಪಿ ನಿಖಿಲ್ ನಾಯಕ್ಗೂ ಜಾಮೀನು ಅರ್ಜಿ ಸಲ್ಲಿಸಿದ್ದೇವೆ. ಎಂಟನೇ ಆರೋಪಿ, ಆರನೇ ಆರೋಪಿ ಬಳಸಿರುವ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ತನಿಖೆಗೆ ವಾಹನಗಳ ಅವಶ್ಯಕತೆಯಿಲ್ಲ. ವಾಹನಗಳು ಠಾಣೆಯ ಬಳಿಯೇ ನಿಂತರೆ ಕೆಟ್ಟು ಹೋಗುತ್ತದೆ. ಹೀಗಾಗಿ ವಾಹನಗಳ ಬಿಡುಗಡೆ ಕೋರಿ ಅರ್ಜಿ ಸಲ್ಲಿಸಿದ್ದು ಜುಲೈ 10ರಂದು ವಿಚಾರಣೆ ನಡೆಯಲಿದೆ" ಎಂದು ತಿಳಿಸಿದರು.
ಇದನ್ನೂ ಓದಿ:ನಟ ದರ್ಶನ್ಗೆ ಜೈಲಿನಲ್ಲಿ ಯಾವುದೇ ವಿಶೇಷ ಸತ್ಕಾರ ಕೊಡುತ್ತಿಲ್ಲ : ಸಚಿವ ಜಿ. ಪರಮೇಶ್ವರ್ - Minister G Parameshwar