ಬೆಂಗಳೂರು:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಮಂದಿ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ.
ದರ್ಶನ್ ಸೇರಿ ಮತ್ತಿತರ ಆರೋಪಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿದ್ದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ, ಇಂದು ಆದೇಶ ಪ್ರಕಟಿಸಿದರು.
ಪರಪ್ಪನ ಅಗ್ರಹಾರ ಹಾಗು ವಿವಿಧ ಜೈಲುಗಳಲ್ಲಿರುವ ಆರೋಪಿಗಳಾದ ಪವಿತ್ರಾ ಗೌಡ, ಆರ್.ನಾಗರಾಜು, ಎಂ.ಲಕ್ಷ್ಮಣ್, ಅನು ಕುಮಾರ್ ಅಲಿಯಾಸ್ ಅನು, ಜಗದೀಶ್ ಅಲಿಯಾಸ್ ಜಗ್ಗ, ಪ್ರದೋಷ್ ರಾವ್ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆ.
ಹೈಕೋರ್ಟ್ ವಿಧಿಸಿರುವ ಷರತ್ತುಗಳು:
- ಎಲ್ಲ ಆರೋಪಿಗಳು ಒಂದು ಲಕ್ಷ ರೂ. ಬಾಂಡ್, ಅಷ್ಟೇ ಮೊತ್ತದ ಇಬ್ಬರ ಶ್ಯೂರಿಟಿ ನೀಡಬೇಕು.
- ವಿಚಾರಣೆಗೆ ತಪ್ಪದೇ ನ್ಯಾಯಾಲಯಕ್ಕೆ ಹಾಜರಾಗಬೇಕು.
- ಸಾಕ್ಷಿಗಳಿಗೆ ಬೆದರಿಕೆ ಮತ್ತು ಸಾಕ್ಷ್ಯಾಧಾರಗಳ ನಾಶಕ್ಕೆ ಮುಂದಾಗಬಾರದು.
- ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ ಭಾಗಿಯಾಗಬಾರದು.
- ವಿಚಾರಣಾ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ಹೋಗಬಾರದು.
ಆದೇಶದ ವಿವರ:ಪ್ರಕರಣದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿರುವ ಎಲ್ಲಾ ಅರ್ಜಿದಾರರಿಗೆ ಗಂಭೀರವಾದ ಅಪರಾಧ ಹಿನ್ನೆಲೆ ಇಲ್ಲ. ಅವರೆಲ್ಲರೂ ಸಮಾಜದಲ್ಲಿ ಆಳವಾದ ಬೇರುಗಳನ್ನು ಹೊಂದಿರುವ ವ್ಯಕ್ತಿಗಳು. ಅರ್ಜಿದಾರರು ಕಳೆದ ಆರು ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿದ್ಧಾರೆ. ಪ್ರಕರಣದ ದೋಷಾರೋಪಟ್ಟಿಯಲ್ಲಿ 262 ಸಾಕ್ಷಿಗಳನ್ನು ಪ್ರಾಸಿಕ್ಯೂಷನ್ ತೋರಿಸಿದೆ. 13 ಸಂಪುಟಗಳಲ್ಲಿ 587 ದಾಖಲೆಗಳನ್ನು ನೀಡಿದೆ. ಶೀಘ್ರದಲ್ಲೇ ಪ್ರಕರಣದ ವಿಚಾರಣೆಯನ್ನು ವಿಚಾರಣಾ ನ್ಯಾಯಾಲಯ ಪೂರ್ಣಗೊಳಿಸುವ ಸಾಧ್ಯತೆ ಕಡಿಮೆ. ಆದ್ದರಿಂದ ಎಲ್ಲಾ ಅರ್ಜಿದಾರರಿಗೆ ಜಾಮೀನು ನೀಡಲಾಗುತ್ತಿದೆ ಎಂದು ಪೀಠ ಹೇಳಿದೆ.
ಜೊತೆಗೆ, ಪಂಕಜ್ ಬನ್ಸಾಲ್ ಮತ್ತು ಪುರ್ಕಾಯಾಸ್ತಾ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ, ಆರೋಪಿಗಳನ್ನು ಬಂಧನ ಮಾಡಿದ ಕೂಡಲೇ ಅವರನ್ನು ಏಕೆ ಬಂಧನ ಮಾಡಲಾಗಿದೆ ಎಂಬ ಕಾರಣ/ಆಧಾರಗಳನ್ನು (ಮೆಮೊ ಆಫ್ ಗ್ರೌಂಡ್ಸ್ ಆಫ್ ಅರೆಸ್ಟ್) ಒದಗಿಸಬೇಕು. ಪ್ರಕರಣದಲ್ಲಿ ಪವಿತ್ರಾ ಗೌಡ (ಎ-1), ದರ್ಶನ್ (ಎ-2) ನಾಗರಾಜು (ಎ-11), ಲಕ್ಷ್ಮಣ್ (ಎ-12), ಪ್ರದೋಷ್ (ಎ-14) ಅವರನ್ನು 2024ರ ಜೂ.11ರಂದು ಬಂಧಿಸಲಾಗಿದೆ. ಜಗದೀಶ್ (ಎ-6), ಅನುಕುಮಾರ್ (ಎ-7) ಅವರನ್ನು ಜೂ.14ರಂದು ಬಂಧಿಸಲಾಗಿದೆ. ವಿಚಾರಣಾ ನ್ಯಾಯಾಲಯದ ಆದೇಶವನ್ನು ಪರಿಶೀಲಿಸಿದರೆ, ಆರೋಪಿಗಳನ್ನು ಬಂಧನ ಮಾಡಿದ ಕೂಡಲೇ, ಅವರಿಗೆ ಬಂಧನದ ಕಾರಣ/ಆಧಾರಗಳನ್ನು ಒದಗಿಸಿಲ್ಲ ಎಂಬುದು ಕಂಡುಬರುತ್ತದೆ. ಇನ್ನು ಆರೋಪಿಗಳ ಬಂಧನದ ವೇಳೆ ಕೋರ್ಟ್ ಸಾಕ್ಷಿಗಳು ಹಾಜರಿದ್ದು, ತಾವು ಏಕೆ ಬಂಧನ ಮೆಮೊಗೆ ಸಹಿ ಹಾಕಿದೆವು? ಎಂಬ ಬಗ್ಗೆ ತನಿಖಾಧಿಕಾರಿಗಳ ಮುಂದೆ ದಾಖಲಿಸಿರುವ ಹೇಳಿಕೆಯಲ್ಲಿ ಏನನ್ನೂ ಹೇಳಿಲ್ಲ. ಸಾಕ್ಷಿಗಳ ಹೇಳಿಕೆಯನ್ನು ವಿಳಂಬವಾಗಿ ದಾಖಲಿಸಿಕೊಳ್ಳಲಾಗಿದೆ ಎಂದು ಪೀಠ ಹೇಳಿದೆ.