ಬೆಂಗಳೂರು:ಮಂಡ್ಯ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ನೀವೇ ಆಗಬೇಕು ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಒತ್ತಾಯಿಸಿ ಸಕ್ಕರೆ ನಾಡಿನ ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು ಇಂದು ಜೆ.ಪಿ. ನಗರದ ಅವರ ನಿವಾಸದ ಎದುರಿನ ರಸ್ತೆಯಲ್ಲಿ ಕುಳಿತು ಘೋಷಣೆ ಕೂಗಿದರು.
ಚೆನ್ನೈನಲ್ಲಿ 3ನೇ ಬಾರಿಗೆ ಯಶಸ್ವಿಯಾಗಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮನೆಗೆ ಮರಳಿದ ಅವರನ್ನು ನೋಡಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಅಸಂಖ್ಯಾತ ಕಾರ್ಯಕರ್ತರು, ಅಭಿಮಾನಿಗಳು ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳ ನಿವಾಸದ ಮುಂದೆ ಜಮಾಯಿಸಿದ ಮಂಡ್ಯ ಜಿಲ್ಲೆಯ ಕಾರ್ಯಕರ್ತರು, ಮುಖಂಡರು ಕುಮಾರಸ್ವಾಮಿ ಅವರೇ ಮಂಡ್ಯ ಕ್ಷೇತ್ರದ ಅಭ್ಯರ್ಥಿಯಾಗಬೇಕು ಎಂದು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಕಾರ್ಯಕರ್ತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ತಂದೆಯವರು ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಈಗಷ್ಟೇ ಮನೆಗೆ ಬಂದಿದ್ದಾರೆ. ಅವರಿಗೆ ಒಂದು ದಿನ ಕಾಲಾವಕಾಶ ಕೊಡಿ ಎಂದು ಮನವಿ ಮಾಡಿದರು. ನಿಖಿಲ್ ಅವರ ಮಾತಿನ ನಡುವೆಯೇ ಕುಮಾರಸ್ವಾಮಿ ಅವರೇ ನಮ್ಮ ಅಭ್ಯರ್ಥಿ ಎಂದು ಘೋಷಣೆಗಳನ್ನು ಕೂಗ ತೊಡಗಿದ ಕಾರ್ಯಕರ್ತರನ್ನು ಕೊನೆಗೆ ಕುಮಾರಸ್ವಾಮಿ ಅವರೇ ಸಮಾಧಾನ ಪಡಿಸಬೇಕಾಯಿತು.
ಮಂಡ್ಯದಲ್ಲಿ ನಮಗೆ ವಿಶೇಷ ಪ್ರೀತಿ ವಿಶ್ವಾಸ ಸಿಕ್ಕಿದೆ. ಅದು ನನ್ನ ಭಾಗ್ಯ. ನಾನು ಈ ಭೂಮಿಯಲ್ಲಿ ಇರುವವರೆಗೂ ಈ ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ. ನನಗೆ ಈವರೆಗೆ ಮೂರು ಬಾರಿ ಹೃದಯ ಶಸ್ತ್ರಚಿಕಿತ್ಸೆ ಆಗಿದೆ. ನನ್ನ ಆರೋಗ್ಯವನ್ನು ನೋಡಿಕೊಂಡು ಪಕ್ಷದ ಕೆಲಸ, ಜನರ ಸೇವೆ ಮಾಡಬೇಕಿದೆ. ನಮ್ಮ ಪಕ್ಷದಲ್ಲಿ ದೊಡ್ಡ ನಾಯಕರು ಯಾರೂ ಇಲ್ಲ. ನಮ್ಮ ಪಕ್ಷದಲ್ಲಿ ಬೆಳೆದವರು ನಮ್ಮನ್ನು ಬೀದಿಯಲ್ಲಿ ನಿಲ್ಲಿಸಿ ಹೋಗಿದ್ದಾರೆ. ನಿಮ್ಮ ಆಸೆಗೆ ನಿರಾಶೆ ಮಾಡಲ್ಲ ಎಂದು ಮಂಡ್ಯದ ಸಭೆಯಲ್ಲೇ ಹೇಳಿದ್ದೇನೆ ಎಂದರು.
ನಾನು ಹುಟ್ಟಿದ್ದು ಹಾಸನ ಜಿಲ್ಲೆಯಲ್ಲಿ. ನನಗೆ ರಾಜಕೀಯ ಜನ್ಮ ಕೊಟ್ಟಿದ್ದು ರಾಮನಗರ ಜಿಲ್ಲೆ, ಜೀವಕ್ಕೆ ಜೀವವಾಗಿ ನನ್ನನ್ನು ಪೊರೆದು ಸಲಹುತ್ತಿರುವ ಜಿಲ್ಲೆ ಮಂಡ್ಯ. ಈ ನೆಲವನ್ನು, ಈ ಜನರ ಪ್ರೀತಿ ವಿಶ್ವಾಸವನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ನಾಳೆ (ಸೋಮವಾರ) ಚನ್ನಪಟ್ಟಣ ಕ್ಷೇತ್ರದ ಮುಖಂಡರನ್ನು ಕರೆಸಿ ಮಾತನಾಡುತ್ತೇನೆ. ನಾಳೆಯ ದಿನ ಯಾವುದೇ ಕಾರಣಕ್ಕೂ ನಿಮಗೆ ನಿರಾಸೆ ಮಾಡಲ್ಲ ಎಂದು ಮಂಡ್ಯ ಜಿಲ್ಲೆಯ ಕಾರ್ಯಕರ್ತರಿಗೆ ಕುಮಾರಸ್ವಾಮಿ ಭರವಸೆ ನೀಡಿದರು.
ನಾಳೆ ಸಂಜೆಯೊಳಗೆ ಅಭ್ಯರ್ಥಿ ಫೈನಲ್: ಇದಕ್ಕೂ ಮೊದಲು ಮಂಡ್ಯ ಕಾರ್ಯಕರ್ತರ ಜತೆ ಮಾತನಾಡಿದ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಂಡ್ಯ ಕಾರ್ಯಕರ್ತರಾದ ತಾವೆಲ್ಲರೂ ಬಂದು ಒತ್ತಾಯ ಮಾಡುತ್ತಿದ್ದೀರಿ. ನಾಳೆ ಚನ್ನಪಟ್ಟಣ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಮಂಡ್ಯದಲ್ಲಿ ತಂದೆಯವರೇ ಚುನಾವಣೆಗೆ ನಿಲ್ಲಲಿ ಎಂದು ಒತ್ತಡ ಇದೆ. ನಮ್ಮ ಕುಟುಂಬದಿಂದ ಚುನಾವಣೆ ಸ್ಪರ್ಧೆ ಬೇಡ ಅಂದುಕೊಂಡಿದ್ದೆವು. ಆದರೆ ಮಂಡ್ಯದ ಪರಿಸ್ಥಿತಿ ಬೇರೆ ಇದೆ. ಹೀಗಾಗಿ ಕುಮಾರಣ್ಣ ಅವರ ಮೇಲೆ ನೀವೆಲ್ಲಾ ಒತ್ತಡ ಹಾಕುತ್ತಿದ್ದೀರಿ. ತಂದೆಯವರು ಒಂದು ದಿನದ ಸಮಯಾವಕಾಶ ಕೇಳಿದ್ದಾರೆ. ನಾಳೆ (ಸೋಮವಾರ) ಸಂಜೆಯೊಳಗೆ ಅಭ್ಯರ್ಥಿ ಯಾರೆಂದು ಅಂತಿಮ ಆಗಬಹುದು ಎಂದು ಹೇಳಿದರು.
2019ರ ಲೊಕಸಭೆ ಚುನಾವಣೆಯಲ್ಲಿ ನನಗೆ ಕೆಲವರ ಕುತಂತ್ರದಿಂದ ಸೋಲಾಯಿತು. ಚಿತಾವಣೆಯಿಂದಲೇ ನಾನು ಸೋತೆ. ಹಾಗಾಗಿ ಜಿಲ್ಲೆಯ ಜನರು, ಕಾರ್ಯಕರ್ತರು ನಾನು ಚುನಾವಣೆಗೆ ಸ್ಪರ್ಧೆ ಮಾಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಕಳೆದ ಬಾರಿ ಸೊತಿದ್ದೀರಿ, ಈ ಬಾರಿ ಗೆಲ್ಲಿಸುತ್ತೇವೆ ಎಂದು ಹೇಳುತ್ತಿದ್ದಾರೆ. ನಾಳೆ ಸಂಜೆಯೊಳಗೆ ತಂದೆಯವರ ನಿರ್ಧಾರ ಗೊತ್ತಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಹಿರಿಯ ನಾಯಕರು, ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಶಾಸಕ ಹೆಚ್.ಟಿ.ಮಂಜುನಾಥ್, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ಜಿಲ್ಲಾ ಯುವ ಜನತಾದಳ ಅಧ್ಯಕ್ಷ ರವಿಕುಮಾರ್, ಹಿರಿಯ ಮುಖಂಡ ರಾಮಚಂದ್ರ ಸೇರಿದಂತೆ ಸಾವಿರಾರು ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿಗಳ ನಿವಾಸದ ಮುಂದೆ ಹಾಜರಿದ್ದರು.
ಇದನ್ನೂಓದಿ:ಚಿಕ್ಕಮಗಳೂರು: ರಂಭಾಪುರಿ ಮಠಕ್ಕೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ - BASAVARAJ BOMMAI