ಸಚಿವ ಪ್ರಹ್ಲಾದ್ ಜೋಶಿ ಮಾಧ್ಯಮದವರ ಜೊತೆ ಮಾತನಾಡಿದರು. ಧಾರವಾಡ:ಜನ ಈಗ ಬಿಜೆಪಿ, ಮೋದಿ, ಜೋಶಿಗೆ ವೋಟ್ ಹಾಕಲು ತುದಿಗಾಲ ಮೇಲೆ ನಿಂತಿದ್ದಾರೆ. ಆದರೆ, ಮತದಾನದ ಅವಧಿ ದೂರ ಆದಂತಾಗಿದೆ. ಅದು ಬಿಟ್ಟರೇ ಉಳಿದಿದ್ದೆಲ್ಲವೂ ನೆಮ್ಮದಿಯಿಂದ ನಡೆದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಪ್ರಚಾರ ಜೋರಾಗಿ ನಡೆದಿದೆ. ನಾನು 4 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲ್ಲುವ ವಿಶ್ವಾಸವಿದೆ. ಜನರ ಸ್ಪಂದನೆ ಉತ್ತಮವಾಗಿದೆ. ಮೋದಿ ಸರ್ಕಾರದಿಂದ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಜನರೇ ಹೇಳುತ್ತಿದ್ದಾರೆ. ಬಹಳ ಸಂತೋಷವಾಗಿದೆ. ಚುನಾವಣೆಗೆ ಸಮಯ ಹೆಚ್ಚಿದೆ ಎಂದು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಭ್ಯರ್ಥಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಾಂಗ್ರೆಸ್ಗೆ ಬಹಳ ಕಡೆ ಅಭ್ಯರ್ಥಿಗಳೇ ಸಿಗುತ್ತಿಲ್ಲ. ನಮ್ಮ ಕ್ಷೇತ್ರ ಸೇರಿ ಬಹಳ ಕಡೆ ಅವರಿಗೆ ಅಭ್ಯರ್ಥಿಗಳೇ ಇಲ್ಲ. ಹೀಗಾಗಿ ಕಾರ್ಯಕರ್ತರು ಹತಾಶೆಗೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಬಿಜೆಪಿಯಿಂದ ಕೆಲವರು ಹೊರಗೆ ಹೋಗುವ ವಿಚಾರದ ಕುರಿತು ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಈ ಸಲ ಬಹಳ ಆಕಾಂಕ್ಷಿಗಳಿದ್ದರು. ಹೀಗಾಗಿ ಸ್ವಲ್ಪ ಅಸಮಾಧಾನದ ಸಮಸ್ಯೆಯಾಗಿದೆ. ಪಕ್ಷದಿಂದ ಸ್ಪರ್ಧಿಸಿದವರು ಗೆಲ್ಲುವರು ಎಂಬ ವಿಶ್ವಾಸವಿದೆ. ಹೀಗಾಗಿ ಅಭ್ಯರ್ಥಿಯಾಗಲು ಪೈಪೋಟಿ ಇತ್ತು. ಅಸಮಾಧಾನಿತರ ಜೊತೆ ಮಾತುಕತೆಗಳು ನಡೆದಿವೆ. ಈಶ್ವರಪ್ಪ ಜೊತೆ ಪಕ್ಷದ ಮುಖಂಡರು ಮಾತನಾಡುತ್ತಿದ್ದಾರೆ. ಈಶ್ವರಪ್ಪ ಹಿರಿಯ, ಪಕ್ಷಕ್ಕೆ ಬದ್ಧತೆ ಇರುವ ನಾಯಕ ಎಂದು ತಿಳಿಸಿದರು.
ಮಹದಾಯಿ ವಿಚಾರ:ಆ ರೀತಿ ಯಾರೂ ಹೇಳಿಲ್ಲ ವನ್ಯಜೀವಿ ಪ್ರದೇಶದ ಬಗ್ಗೆ ಗೊಂದಲವಿದೆ. ಮಹದಾಯಿ ವಿಷಯದಲ್ಲಿ ರಾಜ್ಯ ಸರ್ಕಾರ ಸೂಕ್ತ ಮಾಹಿತಿ ನೀಡುತ್ತಿಲ್ಲ, ಇಲ್ಲಿಯವರೆಗೆ ಆಗಿದ್ದೆಲ್ಲ ಬಿಜೆಪಿಯೇ ಮಾಡಿದೆ. ಕಾಂಗ್ರೆಸ್ ಏನೂ ಮಾಡಿಲ್ಲ, ತದ್ವಿರುದ್ಧ ನಡೆದುಕೊಂಡು ಬಂದಿದೆ. ಇಷ್ಟೊತ್ತಿಗೆ ಕೆಲಸ ಮುಗಿಬೇಕಿತ್ತು. ವನ್ಯಜೀವಿ ಮಂಡಳಿಯವರು ಸಮಯ ತೆಗೆದುಕೊಂಡಿದ್ದಕ್ಕೆ ವಿಳಂಬವಾಗಿದೆ. ಈ ಸಂಬಂಧ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಬೇಕಿತ್ತು. ಸ್ಪಷ್ಟವಾದ ವರದಿ ಕೊಡುವಲ್ಲಿ ವಿಳಂಬ ಮಾಡಿದೆ. ವನ್ಯಜೀವಿ ಮಂಡಳಿ ಸಮಸ್ಯೆ ಇತ್ಯರ್ಥವಾದರೆ ನಾವು ಕಾಮಗಾರಿ ಆರಂಭಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಮೋದಿ ಆಗಮನ ಕುರಿತು ಮಾತನಾಡಿದ ಅವರು, ಮೋದಿ ಹುಬ್ಬಳ್ಳಿಗೂ ಬರಲಿದ್ದಾರೆ. ಹಾವೇರಿ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಚಾರ ನಡೆಯಲಿದೆ. 3-4 ಕ್ಷೇತ್ರಗಳ ಪ್ರಚಾರ ಸೇರಿಸಿ ಹುಬ್ಬಳ್ಳಿಗೆ ಬರಲಿದ್ದಾರೆ ಎಂದು ವಿವರಿಸಿದರು.
ಇದನ್ನೂ ಓದಿ:72ನೇ ವಸಂತಕ್ಕೆ ಕಾಲಿಟ್ಟ ಡಿ.ವಿ ಸದಾನಂದ ಗೌಡ: ಕುದುರೆ ಮೆರವಣಿಗೆ ಮೂಲಕ ಗಮನ ಸೆಳೆದ ಮಾಜಿ ಸಿಎಂ