ಕರ್ನಾಟಕ

karnataka

ETV Bharat / state

Alert.. ಡೆಂಗ್ಯೂ ನಿಯಂತ್ರಣಕ್ಕೆ ಮುಂದಾದ ಬಿಎಂಟಿಸಿ; ಲಾರ್ವಿಸೈಡ್​​​​​ಗಳ ಸಿಂಪಡಣೆ, ನೀರು ಶೇಖರಿಸದಂತೆ ಎಚ್ಚರಿಕೆ - BMTC measures to control dengue

ಡೆಂಗ್ಯೂ ಪ್ರಕರಣ ಹೆಚ್ಚುತ್ತಿದ್ದು, ಬಿಎಂಟಿಸಿ ಬಿಬಿಎಂಪಿ ಸಹಕಾರದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುತ್ತಿದೆ.

By ETV Bharat Karnataka Team

Published : Jul 8, 2024, 8:11 PM IST

ಡೆಂಗ್ಯೂ ನಿಯಂತ್ರಣಕ್ಕೆ ಮುಂದಾದ ಬಿಎಂಟಿಸಿ
ಡೆಂಗ್ಯೂ ನಿಯಂತ್ರಣಕ್ಕೆ ಮುಂದಾದ ಬಿಎಂಟಿಸಿ (ETV bharat)

ಬೆಂಗಳೂರು:ಬಿಎಂಟಿಸಿ ಕಾರ್ಯಾಗಾರಗಳಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಬಿಎಂಟಿಸಿ ಮುಂದಾಗಿದ್ದು, ಬಿಬಿಎಂಪಿ ಸಹಕಾರದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುತ್ತಿದೆ. ನಗರದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸೊಳ್ಳೆಗಳ ಉತ್ಪತ್ತಿ ತಾಣಗಳಾಗುವ ಸ್ಥಳಗಳ ಸ್ವಚ್ಛತೆಗೆ ಆದ್ಯತೆ ನೀಡಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿ.ಎಂ.ಟಿ.ಸಿ.) ಬೆಂಗಳೂರು ನಗರ ಮತ್ತು ಅದಕ್ಕೆ ಸುತ್ತಮುತ್ತಲಿನ ಉಪನಗರ ಹಾಗೂ ಗ್ರಾಮಗಳಿಂದ ನಗರದೊಳಗೆ ನಿರಂತರ ಸಾರಿಗೆ ಸೌಲಭ್ಯ ಒದಗಿಸಲು 49 ಘಟಕಗಳು, 10 ಟಿಟಿಎಂಸಿ, ಮೂರು ಪ್ರಮುಖ ಬಸ್ ನಿಲ್ದಾಣಗಳು (ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್. ಮಾರುಕಟ್ಟೆ, ಶಿವಾಜಿನಗರ ಬಸ್ ನಿಲ್ದಾಣ) ಮತ್ತು 4 ಕಾರ್ಯಾಗಾರಗಳನ್ನು ಸ್ಥಾಪಿಸಿದೆ.

ಡೆಂಗ್ಯೂ ಹರಡುವಿಕೆ ಕುರಿತು ಪರಿಶೀಲಿಸಲು ಕೊಳೆಗೇರಿ ಪ್ರದೇಶಗಳಿಗೆ ಭೇಟಿ ನೀಡಿದ ಸಿ.ಎನ್. ಅಶ್ವತ್ಥನಾರಾಯಣ (ETV Bharat)

ಬೆಂಗಳೂರು ನಗರದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡೆಂಗಿ ನಿಯಂತ್ರಣಕ್ಕೆ ವಿವಿಧ ಮಾರ್ಗದರ್ಶನಗಳನ್ನು ನೀಡಿದೆ. ಈ ಮಾರ್ಗದರ್ಶನಗಳ ಆಧಾರದ ಮೇಲೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ತನ್ನ ಎಲ್ಲ ಘಟಕಗಳು, ಟಿಟಿಎಂಸಿಗಳು, ಮತ್ತು ಪ್ರಮುಖ ಬಸ್​​ ನಿಲ್ದಾಣಗಳಲ್ಲಿ ನೀರು ನಿಲ್ಲದಂತೆ ಸ್ವಚ್ಚತಾ ಕ್ರಮಗಳನ್ನು ಕೈಗೊಳ್ಳಲು ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಅವರು, ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ, ಘಟಕ ವ್ಯವಸ್ಥಾಪಕರುಗಳಿಗೆ, ನಿಲ್ದಾಣಾಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಇದರೊಂದಿಗೆ, ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯ ಸಹಯೋಗದೊಂದಿಗೆ, ಬಿಎಂಟಿಸಿಯ ಎಲ್ಲ ಸ್ಥಳಗಳಲ್ಲಿ ಲಾರ್ವಿಸೈಡ್​​ಗಳನ್ನು ಸಿಂಪಡಿಸಲಾಗುತ್ತಿದೆ. ಡೆಂಗಿ ಹೋಗಲಾಡಿಸಲು ಬಿಎಂಟಿಸಿ ಸಿಬ್ಬಂದಿ ಘಟಕಗಳಲ್ಲಿ ಬಳಸಿದ ಟೈರುಗಳಲ್ಲಿ ನೀರು ಶೇಖರಿಸದಂತೆ ಎಚ್ಚರಿಕೆ ವಹಿಸುವುದು, ನೀರು ಶೇಖರಿಸುವ ಸಿಮೆಂಟ್ ತೊಟ್ಟಿ, ಡ್ರಮ್, ಬ್ಯಾರೆಲ್​ಗಳ ಮೇಲೆ ಮುಚ್ಚಳಗಳನ್ನು ಮುಚ್ಚಲು ಕ್ರಮ, ಘಟಕಗಳಲ್ಲಿ ಶೇಖರಣೆಯಾಗುವ ಘನತ್ಯಾಜಗಳಲ್ಲಿ ನೀರು ನಿಲ್ಲದಂತೆ ಕ್ರಮ ಹಾಗೂ ವಿಲೇವಾರಿ ಮಾಡುವುದು, ಹೂವಿನ ಹೂದಾನಿಗಳಲ್ಲಿ ನೀರು ಶೇಖರಿಸಿದಂತೆ ಎಚ್ಚರಿಕೆ, ಕಟ್ಟಡದ ಮೆಟ್ಟಿಲುಗಳು ಮತ್ತು ಛಾವಣಿಯ ಮೇಲೆ ನೀರು ನಿಲ್ಲದಂತೆ ಎಚ್ಚರಿಕೆ ಸೇರಿದಂತೆ ಈ ಎಲ್ಲ ಕ್ರಮಗಳು ಸೊಳ್ಳೆಗಳ ಸಂಖ್ಯೆಯನ್ನು ನಿಯಂತ್ರಿಸಿ, ಡೆಂಗಿ ಜ್ವರ ಹರಡುವುದನ್ನು ತಡೆಯಲು ಸಹಾಯ ಮಾಡುತ್ತವೆ.

ಸಂಸ್ಥೆಯು ಈ ಕ್ರಮಗಳನ್ನು ಸಂಪೂರ್ಣವಾಗಿ ಪಾಲಿಸುತ್ತಿದೆ ಮತ್ತು ಕೈಗೊಳ್ಳುತ್ತಿದೆ. ಪ್ರಯಾಣಿಕರ ಮತ್ತು ಸಿಬ್ಬಂದಿ ಹಿತರಕ್ಷಣೆಯೇ ನಮ್ಮ ಬಿ.ಎಂ.ಟಿ.ಸಿ.ಯ ಮೊದಲ ಆದ್ಯತೆಯಾಗಿದೆ ಎಂದು ಬಿಎಂಟಿಸಿ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದೆ.

"ಸರ್ಕಾರ ಎಚ್ಚೆತ್ತುಕೊಂಡು ಅಗತ್ಯ ಕ್ರಮಕ್ಕೆ ಮುಂದಾಗಬೇಕು"-ಸಿ.ಎನ್. ಅಶ್ವತ್ಥನಾರಾಯಣ :ಡೆಂಗ್ಯೂ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಮತ್ತು ಬಿಬಿಎಂಪಿ ನಿರ್ಲಕ್ಷ್ಯ ವಹಿಸಿವೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಅಗತ್ಯ ಕ್ರಮಕ್ಕೆ ಮುಂದಾಗಬೇಕು ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಆಗ್ರಹಿಸಿದ್ದಾರೆ.

ಡೆಂಗ್ಯೂ ಹರಡುವಿಕೆ ಕುರಿತು ಪರಿಶೀಲಿಸಲು ಅವರು ಇಂದು ಓಕಳಿಪುರಂ ಚರ್ಚ್ ಬಳಿ ಇರುವ ಕೊಳೆಗೇರಿ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಡೆಂಗ್ಯೂ ಪ್ರಕರಣಗಳು ತೀವ್ರವಾಗಿ ಹೆಚ್ಚಾಗುತ್ತಿವೆ. ಸೊಳ್ಳೆ ನಿಯಂತ್ರಣಕ್ಕೆ ಗಮನ ಕೊಡುತ್ತಿಲ್ಲ. ಎಲ್ಲೆಡೆ ಡೆಂಗ್ಯೂ, ಚಿಕೂನ್‍ಗುನ್ಯ ಸೊಳ್ಳೆಗಳು ಮಾರಕವಾಗಿವೆ ಎಂದು ತಿಳಿಸಿದರು.

ಡೆಂಗ್ಯೂ ಪರೀಕ್ಷೆ ಸಂಬಂಧ ಸರಿಯಾಗಿ ಲ್ಯಾಬ್‍ಗಳನ್ನೂ ಸ್ಥಾಪಿಸಿಲ್ಲ. ಸರಕಾರ, ಬಿಬಿಎಂ ಕೊಟ್ಟಿರುವ ಕರಪತ್ರದಲ್ಲಿ ಎಲ್ಲಿ ಪರೀಕ್ಷೆ ಮಾಡಿಸಬಹುದು ಎಂಬ ಮಾಹಿತಿಯೇ ಇಲ್ಲ. ಎಲ್ಲಿಯೂ ಸರಿಯಾದ ಪರೀಕ್ಷೆ ಆಗುತ್ತಿಲ್ಲ. ರಕ್ತ ಪರೀಕ್ಷೆ ಸೇರಿ ವಿವಿಧ ಪರೀಕ್ಷೆಗಳು ಎಷ್ಟು ನಡೆದಿವೆ?. ಜನರು ಸಾಯುತ್ತಿದ್ದಾರೆ. ಸೋಂಕು ಪ್ರಮಾಣ ಹೆಚ್ಚಾಗಿದೆ. ಆದರೆ, ಮುಖ್ಯಮಂತ್ರಿಗಳು ಒಂದೂ ಸಭೆ ನಡೆಸಿಲ್ಲ. ಸಮರ್ಪಕ ವ್ಯವಸ್ಥೆ ಮಾಡದೇ ಇರುವುದು ದುಃಖಕರ. ಕೋವಿಡ್ ಬಂದಾಗ ನಾವು ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಕೂಡಲೇ ಮಾಡಿದ್ದೆವು. ಆದರೆ, ಈಗ ಡೆಂಗ್ಯೂ ಹರಡುವಿಕೆ ತಪ್ಪಿಸಲು ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.

ಅಧಿಕಾರಿಗೂ ಡೆಂಗ್ಯೂ ಬಂದಿದೆ: "ಮುಖ್ಯ ಆಯುಕ್ತರಿಗೂ ಡೆಂಗ್ಯೂ ಬಂದಿದೆ. ಆದರೂ ಇನ್ನೂ ಗಮನ ವಹಿಸುತ್ತಿಲ್ಲ. ಸೊಳ್ಳೆ ನಿಯಂತ್ರಣ ವಿಚಾರದಲ್ಲಿ ಕ್ರಮ ವಹಿಸುತ್ತಿಲ್ಲ. ಸೊಳ್ಳೆ ನಿಯಂತ್ರಣಕ್ಕೆ ಬೇಕಾದ ಔಷಧ ಸರಿಯಾಗಿ ಬಳಸುತ್ತಿಲ್ಲ. ಬರಿಯ ನೀರು ಸ್ಪ್ರೇ ಮಾಡುತ್ತಾರೆ. ಗುತ್ತಿಗೆದಾರರಿಗೆ ಹಣ ಕೊಡದ ಕಾರಣ ಅವರೂ ಕೆಲಸ ಮಾಡುವುದಿಲ್ಲ ಎಂದರು.

ಮೂಡಾ ಸೊಳ್ಳೆ ಕಚ್ಚಿಸಿಕೊಂಡ ಸಿಎಂ - ಅಶ್ವತ್ಥನಾರಾಯಣ: "ಮುಖ್ಯಮಂತ್ರಿಗಳು ಮೂಡಾ ಸೊಳ್ಳೆ ಕಚ್ಚಿಸಿಕೊಂಡಿದ್ದಾರೆ. ವಾಲ್ಮೀಕಿ ನಿಗಮದ ಹಗರಣ ಅವರನ್ನು ಬಾಧಿಸುತ್ತಿದೆ. ಡೆಂಗ್ಯೂ ಸೊಳ್ಳೆ ಯಾರಿಗೆ ಕಚ್ಚಿದರೆ ನನಗೇನು ಎಂಬ ರೀತಿಯಲ್ಲಿ ಅವರು ಇವತ್ತು ವರ್ತಿಸುತ್ತಿದ್ದಾರೆ. ಇಷ್ಟು ಅನುಭವ ಇರುವ ಸಿಎಂ ಒಂದು ಸಭೆ ಮಾಡಿದ್ದಾರಾ? ಡಿಸಿಎಂ ಶಿವಕುಮಾರ್ ಅವರು ಸೊಳ್ಳೆ ನಿಯಂತ್ರಣದತ್ತ ಗಮನ ಕೊಟ್ಟಿದ್ದಾರಾ? ಎಲ್ಲ ಬೆರಕೆ, ಎಲ್ಲ ಲೂಟಿ ಎಂಬಂತಾಗಿದೆ. ಈ ಸರಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ. ಈಗ ಎಷ್ಟು ಜನರಿಗೆ ಜ್ವರ ಬಂದಿದೆ ಎಂದು ಕ್ಲಿನಿಕ್‍ಗಳಲ್ಲಿ ಮಾಹಿತಿ ಪಡೆದಿದ್ದಾರಾ?" ಎಂದು ಪ್ರಶ್ನೆಯನ್ನು ಮುಂದಿಟ್ಟರು.

ಇದನ್ನೂ ಓದಿ:ರಾಜ್ಯದಲ್ಲಿ ಮೆಡಿಕಲ್ ಎಮರ್ಜೆನ್ಸಿ ಸ್ಥಿತಿ ಇಲ್ಲ, ಡೆಂಗ್ಯೂ ಸೊಳ್ಳೆಗಿಂತ ಬಿಜೆಪಿ ಸುಳ್ಳುಗಳನ್ನೇ ಹೆಚ್ಚು ಹರಡುತ್ತಿದೆ: ಗುಂಡೂರಾವ್ - Minister Dinesh Gundurao

ABOUT THE AUTHOR

...view details