ಬೆಂಗಳೂರು: "ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಯಶವಂತಪುರ ಬಿಜೆಪಿ ಶಾಸಕ ಎಸ್. ಟಿ. ಸೋಮಶೇಖರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ತಿಳಿಸಿದರು.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ನಿನ್ನೆ ಕೂಡ ಎಸ್. ಟಿ. ಸೋಮಶೇಖರ್ ತಮಗೆ ಕರೆ ಮಾಡಿ ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ, ಇಂದು ನಡೆದ ರಾಜ್ಯಸಭೆ ಚುಆವಣೆಯ ಮತದಾನದ ವೇಳೆ ಅಡ್ಡ ಮತದಾನ ಮಾಡಿದ್ದಾರೆ. ಶಿವರಾಮ ಹೆಬ್ಬಾರ್ ಗೈರಾಗಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಈ ಇಬ್ಬರು ಶಾಸಕರು ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಜೊತೆ ತಿರುಗಾಡುತ್ತಿದ್ದರು. ವಿಧಾನಸಭಾ ಚುನಾವಣೆ ನಡೆದು 9 ತಿಂಗಳಾಗಿಲ್ಲ. ಆಗಲೇ ಪಕ್ಷಾಂತರ ಮಾಡುವುದನ್ನು ಜನ ಕ್ಷಮಿಸುವುದಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
" ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಮಂಗಳವಾರ ಬೆಳಗ್ಗೆ ಕೂಡ ತಮ್ಮ ಸಂಪರ್ಕದಲ್ಲಿದ್ದು, ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ ಎಂದಿದ್ದರು. ಈಗ ಅವರ ನಡವಳಿಕೆ ಪ್ರಶ್ನಾರ್ಹವಾಗಿದೆ. ಎಸ್. ಟಿ. ಸೋಮಶೇಖರ್ ಬಿಜೆಪಿಯಲ್ಲಿ ಸಚಿವರಾಗಿದ್ದರು. ಪ್ರಭಾವಿ ಜಿಲ್ಲೆಯಲ್ಲಿ ಮೈಸೂರಿನ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದರು. ಈಗ ಅಡ್ಡ ಮತದಾನ ಮಾಡಿ ಭಿನ್ನ ನಡೆ ಅನುಸರಿಸಿದ್ದಾರೆ" ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.