ಹುಬ್ಬಳ್ಳಿ:ಇಲ್ಲಿನ ಹಳೇಹುಬ್ಬಳ್ಳಿ ಘೋಡ್ಕೆ ಪ್ಲಾಟ್‌ನಲ್ಲಿ ಇಬ್ಬರಿಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕೆ ಹೋದಾಗ ಪೊಲೀಸರ ಮೇಲೆ ಹಲ್ಲೆಗೈದು ಪರಾರಿಯಾಗಲು ಯತ್ನಿಸಿದ ಓರ್ವನ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಹಳೇಹುಬ್ಬಳ್ಳಿ ಘೋಡ್ಕೆ ಪ್ಲಾಟ್‌ನ ಮುಝಮ್ಮಿಲ್ ಎಂಬಾತ ಬಂಧಿತ ಆರೋಪಿ.
ಈತ ಕ್ಷುಲ್ಲಕ ವಿಷಯವಾಗಿ ಸೋಮವಾರ ರಾತ್ರಿ ಹಳೇಹುಬ್ಬಳ್ಳಿ ಆನಂದನಗರ ರಸ್ತೆ ಘೋಡ್ಕೆ ಪ್ಲಾಟ್‌ನ ತಬ್ಲಿಕ್ ಮಸೀದಿ ಬಳಿ ಸಮೀರ ಶೇಖ್ (18) ಹಾಗೂ ಈತನ ಚಿಕ್ಕಪ್ಪ ಜಾವೀದ್ ಶೇಖ್ (32) ಎಂಬವರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಗಾಯಾಳುಗಳು ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ (ETV Bharat) ಪ್ರಕರಣ ಸಂಬಂಧ ಪೊಲೀಸರು ಖಚಿತ ಮಾಹಿತಿ ಮೇರೆಗೆ ಆಪಾದಿತನನ್ನು ವಶಕ್ಕೆ ಪಡೆಯಲು ಹೋದಾಗ ಅವರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಆರೋಪಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಪ್ರತಿಕ್ರಿಯಿಸಿ, "ಚಿಕ್ಕ ಮಕ್ಕಳ ಜಗಳ ವಿಕೋಪಕ್ಕೆ ತಿರುಗಿ ದೊಡ್ಡವರು ಹೊಡೆದಾಡಿಕೊಂಡಿದ್ದಾರೆ. ನಂತರ ಹಿರಿಯರು ಜಗಳ ಬಗೆಹರಿಸಿದ್ದರು. ಆದರೆ ಆರೋಪಿ ಮುಝಮ್ಮಿಲ್ ಎಂಬಾತ ಮಾರಕಾಸ್ತ್ರಗಳಿಂದ ಇಬ್ಬರ ಮೇಲೆ ದಾಳಿ ಮಾಡಿ, ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನನ್ನ ವಿರುದ್ದ ದೂರು ಕೊಟ್ಟರೆ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ. ಜೊತೆಗೆ ಹಣ ಕೊಡಬೇಕು ಎಂದು ಫೋನ್ ಮಾಡಿ ಹೆದರಿಸಿದ್ದಾನೆ. ಪೊಲೀಸರು ಈತನನ್ನು ಬೆಳಗ್ಗೆ ಬಂಧಿಸಿ, ಇತರೆ ಸಹಚರರನ್ನು ತೋರಿಸುವಂತೆ ಕರೆದುಕೊಂಡು ಹೋದಾಗ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಆರೋಪಿ ಮುಝಮ್ಮಿಲ್ ಮೇಲೆ ಆರೇಳು ಪ್ರಕರಣಗಳಿವೆ" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಹೊಸ ವರ್ಷಕ್ಕಾಗಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ 2.50 ಕೋಟಿ ಮೌಲ್ಯದ ಮಾದಕ ಜಪ್ತಿ; ಟ್ಯಾಟೂ ಆರ್ಟಿಸ್ಟ್ ಬಂಧನ