ಬೆಂಗಳೂರು: ಕುಡಿದ ಮತ್ತಿನಲ್ಲಿ ವೈದ್ಯರು ಮಹಿಳಾ ರೋಗಿಗೆ ನಾಲ್ಕಕ್ಕಿಂತ ಹೆಚ್ಚು ಇಂಜೆಕ್ಷನ್ ನೀಡಿ ಅಸಭ್ಯವಾಗಿ ಮಾತನಾಡಿರುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಕುಮಾರಸ್ವಾಮಿ ಪೊಲೀಸ್ ಠಾಣೆಯಲ್ಲಿ ಎನ್ಸಿಆರ್ ದಾಖಲಾಗಿದೆ.
ಉತ್ತರಹಳ್ಳಿ ಮಾರುತಿ ನಗರದ ನಿವಾಸಿಯಾಗಿರುವ ಸ್ನೇಹಾ ಭಟ್ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಗತಿ ಮಲ್ಟಿ ಹಾಸ್ಟಿಟಲ್ ವೈದ್ಯ ಪ್ರದೀಪ್, ನರ್ಸ್ ಮಹೇಶ್ ಎಂಬುವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮದ್ಯಪಾನ ಮಾಡಿ ಮಹಿಳೆಗೆ ಚುಚ್ಚುಮದ್ದು ನೀಡಿದ ಆರೋಪ: ವೈದ್ಯನ ವಿರುದ್ಧ ಪ್ರಕರಣ ದಾಖಲು (ETV Bharat) ಹುಷಾರಿಲ್ಲದ ಕಾರಣ ನಿನ್ನೆ ಸಂಜೆ ಸ್ನೇಹಾ ಭಟ್ ಅವರು ಆಸ್ಪತ್ರೆಗೆ ತೆರಳಿದ್ದರು. ಪಾಳಿಯಲ್ಲಿ ಇಲ್ಲದಿದ್ದರೂ ವೈದ್ಯ ಪ್ರದೀಪ್ ಚಿಕಿತ್ಸೆ ನೀಡಲು ಮುಂದಾಗಿದ್ದರು. ಪಾನಮತ್ತರಾಗಿದ್ದ ವೈದ್ಯರು ಏಕಾಏಕಿ ನಾಲ್ಕಕ್ಕಿಂತ ಹೆಚ್ಚು ಇಂಜೆಕ್ಷನ್ ನೀಡಿದ್ದಾರೆ. ಕರ್ತವ್ಯ ಮುಗಿದ ಬಳಿಕ ಮದ್ಯಪಾನ ಮಾಡಿ ಚಿಕಿತ್ಸೆ ನೀಡಿದ್ದಾರೆ. ಇದನ್ನ ಪ್ರಶ್ನಿಸಿದಾಗ ಅಸಭ್ಯವಾಗಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ಸ್ನೇಹಾ ಭಟ್ ಅವರು ಉಲ್ಲೇಖಿಸಿದ್ದಾರೆ.
ಘಟನೆ ಸಂಬಂಧ ದಕ್ಷಿಣ ವಿಭಾಗದ ಡಿಸಿಪಿ ಲೊಕೇಶ್ ಜಗಲಾಸರ್, ಮದ್ಯಪಾನ ಮಾಡಿ ಮಹಿಳೆಗೆ ಚುಚ್ಚುಮದ್ದು ನೀಡಿರುವ ಆರೋಪದಡಿ ಎನ್ಸಿಆರ್ ದಾಖಲಿಸಿಕೊಳ್ಳಲಾಗಿದೆ. ವೈದ್ಯರ ಮೇಲಿನ ಆರೋಪಕ್ಕೆ ಕುರಿತಂತೆ ವೈದ್ಯಕೀಯ ಮಂಡಳಿಗೆ ಪತ್ರ ಬರೆಯಲಾಗುವುದು. ವರದಿ ಬಂದ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ: ಸರ್ಕಾರಿ ಕಚೇರಿ ಮುಂದೆ ಮದ್ಯಪಾನ ಮಾಡದಂತೆ ಬುದ್ಧಿವಾದ ಹೇಳಿದ ಅಧಿಕಾರಿ ಮೇಲೆ ಹಲ್ಲೆ! - Assault On Officer