ಬೆಂಗಳೂರು:ರಾಜಧಾನಿಯಲ್ಲಿ ತ್ರಿವಳಿ ಕೊಲೆ ನಡೆದಿದೆ. ತಾಯಿ ಹಾಗೂ ಇಬ್ಬರು ಮಕ್ಕಳ ಹತ್ಯೆ ಮಾಡಿರುವ ಜಾಲಹಳ್ಳಿ ಕ್ರಾಸ್ ಬಳಿಯ ಮನೆಯೊಂದರಲ್ಲಿ ಇಂದು (ಬುಧವಾರ) ಸಂಜೆ ಬೆಳಕಿಗೆ ಬಂದಿದೆ. ಆರೋಪಿ ಗಂಗರಾಜು ಎಂಬಾತ ಪೊಲೀಸರಿಗೆ ಶರಣಾಗಿದ್ದಾನೆ.
ಗಂಗರಾಜು ಪತ್ನಿ ಭಾಗ್ಯಮ್ಮ (38), ಪುತ್ರಿ ನವ್ಯ (19) ಹಾಗೂ ಭಾಗ್ಯಮ್ಮರ ಅಕ್ಕನ ಮಗಳಾದ ಹೇಮಾವತಿ (22) ಕೊಲೆಗೀಡಾದವರು. ಕೌಟುಂಬಿಕ ಕಲಹದಿಂದ ಪತಿಯು ಪತ್ನಿ ಸೇರಿ ಮೂವರನ್ನು ಹತ್ಯೆ ಮಾಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.
ಇಂದು ಸಂಜೆ 5 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಆರೋಪಿ ಗಂಗರಾಜು ಮಚ್ಚಿನಿಂದ ಹೊಡೆದು ಎಲ್ಲರನ್ನೂ ಕೊಲೆ ಮಾಡಿದ್ದಾನೆ. ಮನೆಯಲ್ಲೇ ಮೂವರನ್ನು ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಪೀಣ್ಯ ಠಾಣೆ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಹೆಚ್ಚುವರಿ ಪೊಲೀಸ್ ಆಯುಕ್ತರಿಂದ ಮಾಹಿತಿ (ETV Bharat) ಹೆಚ್ಚುವರಿ ಪೊಲೀಸ್ ಆಯುಕ್ತರ ಪ್ರತಿಕ್ರಿಯೆ:ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್, ''ಇವತ್ತು ಸಂಜೆ 5 ಗಂಟೆಗೆ 112ಕ್ಕೆ ಮಾಹಿತಿ ಬಂತು. ಸ್ಥಳಕ್ಕೆ ಹೊಯ್ಸಳ ಸಿಬ್ಬಂದಿ ಬಂದು ಪರಿಶೀಲಿಸಿದ್ದಾರೆ. ಈ ವೇಳೆ ಮೂವರು ಮಹಿಳೆಯರ ಕೊಲೆ ನಡೆದಿರುವುದು ಪತ್ತೆಯಾಗಿದೆ. ಒಂದೇ ಕೊಣೆಯಲ್ಲಿ ಕೊಲೆ ಮಾಡಲಾಗಿದೆ'' ಎಂದರು.
''ಗಂಗರಾಜು ಎಂಬಾತನಿಂದ ಕೊಲೆ ನಡೆದಿದೆ. ಈತ ಹೆಬ್ಬುಗೋಡಿಯಲ್ಲಿ ಹೋಂ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾನೆ. ಕೊಲೆ ಮಾಡಿದ ಬಳಿಕ ಮಾರಕಾಸ್ತ್ರದ ಸಮೇತ ಆತನೇ ಠಾಣೆಗೆ ಬಂದು ಶರಣಾಗಿದ್ದಾನೆ. ಮೂಲತಃ ಇವರು ನೆಲಮಂಗಲದವರು. ಕಳೆದ ಆರು ವರ್ಷದಿಂದ ಬಾಡಿಗೆ ಮನೆಯಲ್ಲಿ ಇಲ್ಲಿ ವಾಸವಾಗಿದ್ದರು. ಯಾಕೆ ಕೊಲೆ ಮಾಡಲಾಗಿದೆ ಎಂಬುದರ ಬಗ್ಗೆ ವಿಚಾರಣೆ ಮಾಡಲಾಗುತ್ತದೆ'' ಎಂದು ತಿಳಿಸಿದರು.
ಇದನ್ನೂ ಓದಿ:ಸಮುದ್ರದಲ್ಲಿ ಈಜಲು ತೆರಳಿದ್ದ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲು; ಮಂಗಳೂರಲ್ಲಿ ದುರ್ಘಟನೆ