ಬೆಂಗಳೂರು: ಬಿಟ್ ಕಾಯಿನ್ ಹಗರಣದಲ್ಲಿ ಹ್ಯಾಕರ್ ಶ್ರೀಕೃಷ್ಣ ಆಲಿಯಾಸ್ ಶ್ರೀಕಿ ಬಂಧಿತನಾಗಿರುವಾಗ ಅಕ್ರಮವಾಗಿ ಆತನ ವ್ಯಾಲೆಟ್ನಿಂದ ಕ್ರಿಪ್ಟೊ ಕರೆನ್ಸಿ ವರ್ಗಾವಣೆ ಹಾಗೂ ಸಾಕ್ಷ್ಯನಾಶಪಡಿಸಿದ ಆರೋಪ ಪ್ರಕರಣದ ಸಂಬಂಧ ನಾಪತ್ತೆಯಾಗಿದ್ದ ರಾಜ್ಯ ಆಂತರಿಕಾ ಭದ್ರತಾ ವಿಭಾಗದ ಡಿವೈಎಸ್‌ಪಿ ಶ್ರೀಧರ್ ಕೆ. ಪೂಜಾರ್ ಕೊನೆಗೂ ವಿಶೇಷ ತನಿಖಾ ತಂಡ (ಎಸ್ಐಟಿ)ದ ಮುಂದೆ ಇಂದು ಹಾಜರಾದರು.
ಆದರೆ, ಪ್ರಕರಣದ ತನಿಖಾಧಿಕಾರಿ ಡಿವೈಎಸ್‌ಪಿ ಬಾಲರಾಜು ಅವರು ವೈದ್ಯಕೀಯ ರಜೆಯಲ್ಲಿರುವ ಕಾರಣ ಆರೋಪಿತ ಅಧಿಕಾರಿ ಶ್ರೀಧರ್ ಕೆ. ಪೂಜಾರ್ಗೆ ಮತ್ತೆ ನಿಗದಿತ ದಿನದಂದು ವಿಚಾರಣೆಗೆ ಬರುವಂತೆ ತಿಳಿಸಲಾಗಿದೆ ಎಂದು ಎಸ್ಐಟಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ 2020 ರಲ್ಲಿ ಸಿಸಿಬಿಯಲ್ಲಿ ಆಗಿನ ಇನ್‌ಸ್ಪೆಕ್ಟರ್ ಅಗಿದ್ದ ಶ್ರೀಧರ್ ಪೂಜಾರ್ ಸೇರಿದಂತೆ ಇನ್ನಿತರರ ಮೇಲೆ ಶ್ರೀಕಿಯಿಂದ ಕ್ರಿಫ್ಟೊ ಕರೆನ್ಸಿ ವರ್ಗಾವಣೆ ಹಾಗೂ ಸಾಕ್ಷ್ಯ ನಾಶಪಡಿಸಿದ ಆರೋಪದಡಿ ಎಫ್ಐಆರ್ ದಾಖಲಾಗಿತ್ತು. ಪ್ರಕರಣ ದಾಖಲಿಸಿ ಇನ್‌ಸ್ಪೆಕ್ಟರ್ ಪ್ರಶಾಂತ್ ಬಾಬು, ಲಕ್ಷ್ಮೀಕಾಂತಯ್ಯ ಅವರನ್ನು ಬಂಧಿಸಲಾಗಿತ್ತು.
ಶ್ರೀಧರ್ ಪೂಜಾರ್ ಬಂಧನಕ್ಕೆ ಮುಂದಾದಾಗ ವಿಧಾನಸೌಧ ಪೊಲೀಸ್ ಠಾಣೆ ವ್ಯಾಪ್ತಿಯ ಸಿವಿಲ್ ಕೋರ್ಟ್ ಬಳಿ ಎಸ್ಐಟಿ ತಂಡದ ಕಾರಿಗೆ ಬೇರೆ ವಾಹನದಿಂದ ಡಿಕ್ಕಿ ಹೊಡೆಸಿ, ಎಸ್ಕೇಪ್ ಆಗಿರುವ ಆರೋಪವಿದೆ. ಈ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ಬಳಿಕ ಅಧಿಕಾರಿಯನ್ನು ಬಂಧಿಸಲು ನಿರಂತರ ಶೋಧ ನಡೆಸಿದರೂ ಪತ್ತೆಯಾಗಿರಲಿಲ್ಲ. ಹೀಗಾಗಿ, ನ್ಯಾಯಾಲಯದ ಅನುಮತಿ ಮೇರೆಗೆ ಘೋಷಿತ ಅಪರಾಧಿ ಎಂದು ತೀರ್ಮಾನಿಸಿ ಡಿವೈಎಸ್‌ಪಿ ಬಗ್ಗೆ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ಎಸ್ಐಟಿ ಪತ್ರಿಕಾ ಪ್ರಕಟಣೆ ಹೊರಡಿಸಿತ್ತು.
ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್ ಹಾಗೂ ವಿಚಾರಣಾ ನ್ಯಾಯಾಲಯವು ಘೋಷಿತ ಆರೋಪಿ ಎಂದು ವಾರಂಟ್ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ, ಡಿವೈಎಸ್‌ಪಿ ಶ್ರೀಧರ್ ಕೆ. ಪೂಜಾರ್ ಅರ್ಜಿ ಸಲ್ಲಿಸಿದ್ದರು. ಇದನ್ನು ಮಾನ್ಯ ಮಾಡಿದ ನ್ಯಾಯಮೂರ್ತಿ ಶ್ರೀಷಾನಂದ ಅವರಿದ್ದ ನ್ಯಾಯಪೀಠವು ಘೋಷಿತ ಆರೋಪ ಎಂಬ ಆರೋಪವನ್ನು ಹೈಕೋರ್ಟ್ ಮೇ 2ರಂದು ರದ್ದುಪಡಿಸಿತ್ತು.
ಆದರೆ, ಎಫ್‌ಐಆರ್‌ನ್ನು ರದ್ದುಪಡಿಸಲು ನಿರಾಕರಿಸಿತ್ತು. ಅಲ್ಲದೇ, ಮೇ 8 ರಂದು (ಇಂದು) ಬೆಳಗ್ಗೆ 9 ಗಂಟೆಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಕಸ್ಟಡಿಗೆ ಪಡೆದು ತನಿಖೆ ನಡೆಸಬೇಕು. ನಂತರ 2 ಲಕ್ಷ ರೂ. ಬಾಂಡ್ ಪಡೆದು ಬಿಡುಗಡೆ ಮಾಡಬೇಕು. ಪೊಲೀಸರ ತನಿಖೆಗೆ ಆರೋಪಿ ಶ್ರೀಧರ್ ಕೆ. ಪೂಜಾರ್ ಸಹಕರಿಸಬೇಕು ಎಂದು ತಿಳಿಸಿದ್ದ ಹೈಕೋರ್ಟ್, ಅರ್ಜಿಯನ್ನು ಇತ್ಯರ್ಥಪಡಿಸಿತ್ತು.
ಇದನ್ನೂ ಓದಿ:ತುಮಕೂರು ಬಿಟ್ ಕಾಯಿನ್ ಕಳ್ಳತನ ಪ್ರಕರಣದಲ್ಲಿ ವಿಚಾರಣೆಗೆ ಗೈರು, ಶ್ರೀಕಿ ಬಂಧನ - Bitcoin Theft Case