ಬೆಂಗಳೂರು:ಮಾರಕಾಸ್ತ್ರ ಹಿಡಿದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಶಶಾಂಕ್ (26) ಬಂಧಿತ ಯುವಕ.
ಸಮಾಜದಲ್ಲಿ ಭೀತಿಯ ವಾತಾವರಣ ಸೃಷ್ಟಿಸುತ್ತಿದ್ದ ಆರೋಪದಡಿ ಈತನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯಲ್ಲಿ ಆರೋಪಿಯ ವಿರುದ್ಧ ಮೇಲೆ 7 ಪ್ರಕರಣಗಳಿರುವುದು ಬೆಳಕಿಗೆ ಬಂದಿದೆ. 2015ರಲ್ಲಿ ಹುಳಿಮಾವು ಹಾಗೂ 2019ರಲ್ಲಿ ಬನ್ನೇರುಘಟ್ಟ ಪೊಲೀಸ್ ಠಾಣೆಗಳಲ್ಲಿ ತಲಾ ಒಂದೊಂದು ಹತ್ಯೆ ಪ್ರಕರಣಗಳು, ರಾಜಾಜಿನಗರ, ತಿಲಕನಗರ ಠಾಣಾ ವ್ಯಾಪ್ತಿಗಳಲ್ಲಿ ಒಂದೊಂದು ಕೊಲೆ ಯತ್ನ ಪ್ರಕರಣ, ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಅಪಹರಣ, ಕೊಲೆಯತ್ನ ಪ್ರಕರಣ ಹಾಗೂ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಒಂದು ಹಲ್ಲೆ ಪ್ರಕರಣ ಸೇರಿದಂತೆ ಒಟ್ಟು ಏಳು ಪ್ರಕರಣಗಳಿರುವುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಇನ್ನೂ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಎಂ ವಿರುದ್ಧ ಅವಹೇಳನಕಾರಿ ಆಡಿಯೋ ಅಪ್ಲೋಡ್:ಕಳೆದ ನವೆಂಬರ್ನಲ್ಲಿ ಬೆಳ್ತಂಗಡಿಯ ಬಿಜೆಪಿ ಕಾರ್ಯಕರ್ತರೊಬ್ಬರು ಸಿಎಂ ವಿರುದ್ಧ ಅವಹೇಳನಕಾರಿ ಆಡಿಯೋ ಹರಿಬಿಟ್ಟಿದ್ದರು. ಬಳಿಕ ಅವರ ಮೇಲೆ ಎಫ್ಐಆರ್ ದಾಖಲಾಗಿತ್ತು. ಇದಕ್ಕೂ ಹಿಂದೆ ಸಿಎಂ, ಡಿಸಿಎಂ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೋರ್ವ ಅವಹೇಳನಕಾರಿ ಪೋಸ್ಟ್ ಮಾಡಿದ್ದರು. ಇವರ ವಿರುದ್ಧ ಬೆಂಗಳೂರಿನ ವೈಟ್‌ಫೀಲ್ಡ್ ಸೆನ್ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.