ಚಿಕ್ಕಮಗಳೂರು:ವ್ಯಕ್ತಿಯೊಬ್ಬರ ತಮ್ಮ ಮಗಳ ಚಿಕಿತ್ಸೆಗೆ ಸಹಾಯ ಮಾಡುವುದಾಗಿ ಹೇಳಿ ಅವರಿಗೇ ವಂಚಿಸಿದ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಬಾಲಕಿ ಮೃತಪಟ್ಟಿದ್ದಾಳೆ. ಇದಾದ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಘಟನೆಯ ವಿವರ: ಚಿಕ್ಕಮಗಳೂರು ತಾಲೂಕಿನ ಬೆಟ್ಟದ ಮಳಲಿಯ ರವಿ ಎಂಬವರ ಪುತ್ರಿ ಬ್ರೇನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಚಿಕಿತ್ಸೆಗೆ ಸಹಾಯ ಮಾಡುವಂತೆ ರವಿ ಫೇಸ್‌ಬುಕ್‌ನಲ್ಲಿ ಮಾಹಿತಿ ಪೋಸ್ಟ್ ಮಾಡಿದ್ದರು. ಇದನ್ನು ನೋಡಿದ ಅಬ್ದುಲ್ ಖಾದರ್ ಎಂಬಾತ ರವಿ ಅವರಿಗೆ ಕರೆ ಮಾಡಿದ್ದಾನೆ. ನಾನು ನಿಮಗೆ ಸಹಾಯ ಮಾಡುತ್ತೇನೆ. ನನಗೆ ಶೇ.10ರಷ್ಟು ದುಡ್ಡು ಕೊಡಬೇಕು ಎಂದು ಹೇಳಿದ್ದಾನೆ. ಇದನ್ನು ನಂಬಿದ ರವಿ ಈಗ ಮೋಸ ಹೋಗಿದ್ದಾರೆ. ಇನ್ನೊಂದೆಡೆ ತಮ್ಮ ಮಗಳನ್ನೂ ಕಳೆದುಕೊಂಡಿದ್ದಾರೆ.
ಈ ಬಗ್ಗೆ ಎಸ್ಪಿ ವಿಕ್ರಂ ಅಮಟೆ ಮಾತನಾಡಿದ್ದು, ''ಇತ್ತೀಚಿಗೆ ಚಿಕ್ಕಮಗಳೂರಿನ ಸೆನ್ ಠಾಣೆಯಲ್ಲಿ ರವಿ ಎಂಬವರು ಒಂದು ದೂರು ದಾಖಲಿಸಿದ್ದರು. ತಮ್ಮ ಮಗುವಿಗೆ ಮೆದುಳಿನಲ್ಲಿ ಕಾಯಿಲೆ ಇದೆ. ಚಿಕಿತ್ಸೆಗೆ ಹಣ ಸಹಾಯ ಮಾಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಮನವಿ ಮಾಡಿದ್ದರು. ಇದನ್ನು ಗಮನಿಸಿದ ಆರೋಪಿ ಅವರಿಂದಲೇ ಅಂದಾಜು 2 ಲಕ್ಷ ಹಣ ಹಾಕಿಸಿಕೊಂಡಿದ್ದಾನೆ. ಈ ವಿಚಾರವಾಗಿ ನಮ್ಮ ಸೆನ್ ಪೊಲೀಸ್ ಠಾಣೆಯಲ್ಲಿ ಇನ್ಫಾರ್ಮೇಷನ್ ಆ್ಯಕ್ಟ್ ಹಾಗೂ ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು".