ಬೆಂಗಳೂರು:ಸರ್ಕಾರಿ ಕೆಲಸ, ಚಿನ್ನದ ಉದ್ಯಮ ಹಾಗೂ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಹೆಸರಿನಲ್ಲಿ ಹಣ ಪಡೆದು ಹಲವರಿಗೆ ವಂಚಿಸಿದ್ದ ಪ್ರಕರಣದ ಆರೋಪಿಯನ್ನು ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಮಾಜಿ ಪಿಡಿಒ ಯೋಗೇಂದ್ರ ಎಂಬಾತ ಬೆಂಗಳೂರಿನ ಏರ್‌ಪೋರ್ಟ್‌ಗೆ ಬಂದಿಳಿಯುತ್ತಿದ್ದಂತೆ ಬಂಧಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿದ್ದ ಯೋಗೇಂದ್ರ, 2020ರಲ್ಲಿ ಕರ್ತವ್ಯದಿಂದ ವಜಾಗೊಂಡಿದ್ದ. 2023ರಲ್ಲಿ ಸರ್ಕಾರಿ ಕೆಲಸ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಂದ 17 ಲಕ್ಷ ರೂ. ಪಡೆದು ಪರಾರಿಯಾಗಿದ್ದ ಆರೋಪದ ಮೇಲೆ ಯೋಗೇಂದ್ರ ವಿರುದ್ಧ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೇ, ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹಣ ಡಬಲ್ ಮಾಡಿಕೊಡುವುದಾಗಿ ವ್ಯಕ್ತಿಯೊಬ್ಬರಿಂದ 1.35 ಕೋಟಿ ರೂ ಪಡೆದು ವಂಚಿಸಿದ್ದ ಆರೋಪದ ಮೇಲೆ ಯೋಗೇಂದ್ರ ವಿರುದ್ಧ 2024ರಲ್ಲಿ ವಿ.ವಿ.ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಶ್ರೀಲಂಕಾ, ನಂತರ ಅಲ್ಲಿಂದ ದುಬೈಗೆ ತೆರಳಿ ತಲೆಮರೆಸಿಕೊಂಡಿದ್ದ. ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದ ಪೊಲೀಸರು ಆತ ಬೆಂಗಳೂರಿಗೆ ಬಂದಿಳಿಯುತ್ತಿದ್ದಂತೆ ಬಂಧಿಸಿದ್ದಾರೆ.