ಚಿಕ್ಕಮಗಳೂರು:ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಬೀಡು ಬಿಟ್ಟಿರುವ ಕಾಡಾನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ನಗರದ ಸಮೀಪವೇ 27ಕ್ಕೂ ಹೆಚ್ಚು ಆನೆಗಳು ಬೀಡು ಬಿಟ್ಟಿದ್ದು, ಚಿಕ್ಕಮಗಳೂರಿನ ಹಲವು ಗ್ರಾಮಗಳಲ್ಲಿನ ಜನರಲ್ಲಿ ಆತಂಕ ಹೆಚ್ಚಳಗೊಂಡಿದೆ.
ಹಾಸನ ಜಿಲ್ಲೆಯಿಂದ ಚಿಕ್ಕಮಗಳೂರಿಗೆ ಎಂಟ್ರಿ ಕೊಟ್ಟಿರೋ ಕಾಡಾನೆಗಳನ್ನ ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.
ನಿನ್ನೆ ಬೆಳಗ್ಗೆಯಿಂದಲೂ ಚಿಕ್ಕಮಗಳೂರಿನ ವಸತಿ ಶಾಲೆಯ ಬಳಿಯಿದ್ದ ಗ್ಯಾಂಗ್ ಅಲ್ಲೇ ವಾಸ್ತವ್ಯ ಹೂಡಿದೆ. ಕಳೆದ ರಾತ್ರಿ 100ಕ್ಕೂ ಅಧಿಕ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಕಾರ್ಯಾಚರಣೆ ನಡೆಸಿ, ಪಟಾಕಿ ಸಿಡಿಸಿದ್ದರೂ ಕೂಡಾ ಆನೆಯನ್ನು ಕಾಡಿಗಟ್ಟುವ ಪ್ರಯತ್ನ ವಿಫಲವಾಗಿತ್ತು.
ಚಿಕ್ಕಮಗಳೂರು ನಗರದ ಸುತ್ತಮುತ್ತಲಿನ ಒಂಭತ್ತು ಗ್ರಾಮಗಳಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ನಗರದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುತ್ತಾಡುತ್ತಿರುವ ಬೀಟಮ್ಮ ಟೀಮ್ನಿಂದ ಯಾರಿಗೂ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ನಗರದ ಹಲವು ಗ್ರಾಮಗಳಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ.
ಕಾಡಾನೆಗಳನ್ನ ಹಿಮ್ಮೆಟ್ಟಿಸಲಿದೆ ಅಭಿಮನ್ಯು ತಂಡ:ಕುಮ್ಕಿ ಆನೆಗಳ ಮೂಲಕ ಕಾಡಿಗಟ್ಟುವ ಕಾರ್ಯಾಚರಣೆ ಇಂದಿನಿಂದ ಪ್ರಾರಂಭವಾಗಿದೆ. ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಅಭಿಮನ್ಯು ತಂಡ ಆಗಮಿಸಿದ್ದು, ಅಭಿಮನ್ಯು ನೇತೃತ್ವದಲ್ಲಿ ಆನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಪ್ಲಾನ್ ಮಾಡಿಕೊಂಡಿದೆ. ಚಿಕ್ಕಮಗಳೂರು ಬಳಿಯ ಮತ್ತಾವರಕ್ಕೆ ಸಾಕಾನೆಗಳು ಬಂದು ಇಳಿದಿದ್ದು, ಅಭಿಮನ್ಯು, ಕರ್ನಾಟಕ ಭೀಮ, ಹರ್ಷ, ಧನಂಜಯ, ಅಶ್ವತ್ಥಾಮ, ಸುಗ್ರೀವ ಸೇರಿ 8 ಆನೆಗಳು ಬಂದಿವೆ.