ಬೆಂಗಳೂರು: ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಓರ್ವ ಹೇಡಿ ಎನ್ನುವುದು ಗೊತ್ತಾಗಿದೆ. ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದ ಅರವಿಂದ್ ಕೇಜ್ರಿವಾಲ್ ಅವರನ್ನು ನೇರವಾಗಿ ಎದುರಿಸಲಾಗದೇ ಪಿತೂರಿ ನಡೆಸಿ ಬಂಧನಕ್ಕೆ ಒಳಗಾಗುವಂತೆ ಮಾಡಿದ್ದಾರೆ. ಹೇಡಿಗಳಷ್ಟೇ ಕುತಂತ್ರ, ಪಿತೂರಿ, ವಾಮ ಮಾರ್ಗಗಳನ್ನು ಅನುಸರಿಸುತ್ತಾರೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ವಿರೋಧಿಸಿ ಎಎಪಿ ಇಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಸಾಮೂಹಿಕ ಉಪವಾಸ ಸತ್ಯಾಗ್ರಹ ನಡೆಸುತ್ತಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ತಮ್ಮನ್ನು ಅಧಿಕಾರದಿಂದ ಕಿತ್ತೆಸೆಯುತ್ತಾರೆ ಎನ್ನುವುದನ್ನು ಅರಿತ ಮೋದಿ ಸರ್ಕಾರ ಹೇಗಾದರೂ ಮಾಡಿ ಮತ್ತೆ ಅಧಿಕಾರ ಹಿಡಿಯಬೇಕೆಂಬ ಕಾರಣಕ್ಕೆ ವಾಮಮಾರ್ಗಗಳನ್ನು ಅನುಸರಿಸುತ್ತಿದೆ. ಮೊದಲು ಚುನಾವಣಾ ಬಾಂಡ್ ಮೂಲಕ ಅತಿದೊಡ್ಡ ಹಗರಣ ನಡೆಸಿರುವ ನರೇಂದ್ರ ಮೋದಿ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಲಿ ಎಂದು ಆಗ್ರಹಿಸಿದರು.
ಪ್ರಕರಣಕ್ಕೂ ಕೇಜ್ರಿವಾಲ್ಗೂ ಸಂಬಂಧವೇ ಇಲ್ಲ. ಪ್ರಮುಖ ಆರೋಪಿ ಶರತ್ ಚಂದ್ರ ರೆಡ್ಡಿ ಅವರ ಒಂದು ಹೇಳಿಕೆ ಆಧರಿಸಿ ಅವರನ್ನು ಬಂಧಿಸಲಾಗಿದೆ. ಕೇಜ್ರಿವಾಲ್ ವಿರುದ್ಧ ಹೇಳಿಕೆ ನೀಡಿದರೆ, ಚುನಾವಣಾ ಬಾಂಡ್ ಮೂಲಕ ಬಿಜೆಪಿಗೆ ದೇಣಿಗೆ ನೀಡಿದರೆ ಬಂಧಮುಕ್ತಗೊಳಿಸುವುದಾಗಿ ಪುಸಲಾಯಿಸಿ ಶರತ್ ಚಂದ್ರ ರೆಡ್ಡಿರನ್ನು ಸಾಕ್ಷಿಧಾರನನ್ನಾಗಿಸಲಾಗಿದೆ. ಡೀಲ್ ಪ್ರಕಾರ ಶರತ್ ಚಂದ್ರ ರೆಡ್ಡಿ ಒಡೆತನದ ಕಂಪನಿ ಬಿಜೆಪಿಗೆ ಚುನಾವಣಾ ಬಾಂಡ್ ಮೂಲಕ ಕೋಟ್ಯಂತರ ರೂಪಾಯಿ ದೇಣಿಗೆ ನೀಡಿದೆ. ನಂತರ ಬೆನ್ನು ನೋವು ಎಂಬ ಕಾರಣಕ್ಕೆ ಪ್ರಮುಖ ಆರೋಪಿಯನ್ನು ಬಿಡುಗಡೆ ಮಾಡಲಾಗಿದೆ. ಈ ಅವ್ಯವಹಾರದಲ್ಲಿ ನೇರವಾಗಿ ಭಾಗಿಯಾಗಿರುವ ಬಿಜೆಪಿ ನಾಯಕರನ್ನು ಏಕೆ ಬಂಧಿಸಲಾಗಿಲ್ಲ, ಇದರ ರೂವಾರಿ ನರೇಂದ್ರ ಮೋದಿ ಅವರನ್ನು ಸಹ ಬಂಧಿಸಬೇಕಲ್ಲವೇ ಎಂದು ಮುಖ್ಯಮಂತ್ರಿ ಚಂದ್ರು ಪ್ರಶ್ನಿಸಿದರು.