ಶಿವಮೊಗ್ಗ: ಸಾಗರ ತಾಲೂಕು ಆನಂದಪುರ ಸಮೀಪದ ಕೊರಲಿಕೊಪ್ಪದಲ್ಲಿ ವಿದ್ಯುತ್ ಪ್ರವಹಿಸಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಇಂದು ನಡೆದಿದೆ. ಕೊರಲಿಕೊಪ್ಪ ಗ್ರಾಮದ ಹರೀಶ್ (30) ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಹರೀಶ್ ಇಂದು ಮಧ್ಯಾಹ್ನ ಮನೆಯಲ್ಲಿ ಸ್ನಾನ ಮುಗಿಸಿ ಮನೆ ಮುಂದೆ ಇರುವ ತಂತಿಯಲ್ಲಿ ಬಟ್ಟೆ ಒಣಗಿಸಲು ಹೋದಾಗ ಏಕಾಏಕಿ ವಿದ್ಯುತ್ ಪ್ರವಹಿಸಿ ಯುವಕ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಸ್ನೇಹಿತರೊಂದಿಗೆ ಇಂದು ತಿರುಪತಿ ದೇವಸ್ಥಾನಕ್ಕೆ ಹೊರಟಿದ್ದ ಹರೀಶ್ ಮನೆ ಮುಂದೆ ವಿದ್ಯುತ್ ಗ್ರೌಂಡಿಂಗ್ ಆಗಿರುವುದನ್ನು ಗಮನಿಸದೇ ಬಟ್ಟೆ ಒಣಗಿಸಲು ಹೋಗಿ ಮೃತಪಟ್ಟಿದ್ದಾರೆ.