ಕರ್ನಾಟಕ

karnataka

ETV Bharat / state

ಮೈಸೂರಲ್ಲಿ ಹಿಟ್​ ಅಂಡ್​​ ರನ್​ಗೆ ಮಹಿಳೆ ಬಲಿ: ಐವರಿಗೆ ಗಂಭೀರ ಗಾಯ - HIT AND RUN CASE

ಅಪರಿಚಿತ ಕಾರೊಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕುಟುಂಬದ ಸದಸ್ಯರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮಹಿಳೆ ಸಾವನ್ನಪ್ಪಿ ಐವರಿಗೆ ಗಂಭೀರ ಗಾಯಗಳಾಗಿದೆ.

ಕವಲಂದೆ ಪೊಲೀಸ್ ಠಾಣೆ
ಅಪಘಾತದಲ್ಲಿ ಮೃತಪಟ್ಟ ಮಹಿಳೆ ಮಂಜುಳಾ. (ETV Bharat)

By ETV Bharat Karnataka Team

Published : Nov 15, 2024, 4:17 PM IST

ಮೈಸೂರು:ಹಿಟ್​ ಅಂಡ್​​​ ರನ್​ಗೆ ಓರ್ವ ಮಹಿಳೆ ಸಾವನ್ನಪ್ಪಿ, ಐವರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಂಜನಗೂಡು ತಾಲೂಕಿನ ದೊಡ್ಡಕವಲಂದೆ ಗ್ರಾಮದ ಚಾಮರಾಜನಗರ ನಂಜನಗೂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ನಂಜನಗೂಡು ತಾಲೂಕಿನ ಹನುಮನಪುರ ಗ್ರಾಮದ ಲಕ್ಷ್ಮಣ ಎಂಬುವವರ ಪತ್ನಿ ಮಂಜುಳಾ (32) ಮೃತ ದುರ್ದೈವಿ. ಲಕ್ಷ್ಮಣ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ದೊಡ್ಡ ಕವಲಂದೆ ಗ್ರಾಮದ ಬ್ಯಾಂಕಿಗೆ ಖಾತೆ ತೆರೆಯಲು ತೆರಳಿದ್ದರು. ಈ ವೇಳೆ, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ನಂಜನಗೂಡು ಕಡೆಯಿಂದ ಚಾಮರಾಜನಗರ ಕಡೆಗೆ ಅತಿ ವೇಗವಾಗಿ ಬಂದ ಕಾರಿನ ಚಾಲಕ ರಸ್ತೆಯ ಬದಿಯಲ್ಲಿ ನಿಂತಿದ್ದ ಬೈಕ್​ಗಳಿಗೆ ಡಿಕ್ಕಿ ಹೊಡೆದುದಲ್ಲದೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಲಕ್ಷ್ಮಣನ ಕುಟುಂಬವಲ್ಲದೇ ಮತ್ತಿಬ್ಬರಿಗೂ ಗುದ್ದಿದ್ದಾನೆ.

ಪರಿಣಾಮ ಮಂಜುಳಾ ತನ್ನ ಮಕ್ಕಳನ್ನು ಬಚಾವ್ ಮಾಡುವಾಗ ಕಾರಿನ ಚಕ್ರ ಹೊಟ್ಟೆಯ ಮೇಲೆ ಹರಿದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮಂಜುಳಾ ಪತಿ ಲಕ್ಷ್ಮಣ, ಮಕ್ಕಳಾದ ಸಿಂಧು, ನೆಹರು ಅಲ್ಲದೇ ಮತ್ತಿಬ್ಬರಾದ ಶಿವಮಲ್ಲು, ರಾಚಪ್ಪರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ಅಪಘಾತವೆಸೆಗಿದ ಚಾಲಕ ಕಾರಿನೊಂದಿಗೆ ಪರಾರಿಯಾಗಿದ್ದಾನೆ. ಮೃತ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಕುಟುಂಬಸ್ಥರಿಗೆ ಒಪ್ಪಿಸಲಾಯಿತು. ಮೃತ ಮಹಿಳೆ ಅಪಘಾತಕ್ಕೂ ಮುನ್ನ ಅಂಗಡಿಯೊಂದರಲ್ಲಿ ಇದ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

"ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಕವಲಂದೆ ಗ್ರಾಮದ ನಂಜನಗೂಡು ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯ ಮುಖ್ಯ ರಸ್ತೆಯಲ್ಲಿ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿವೆ. ರಸ್ತೆಗೆ ಬ್ಯಾರಿಕೇಡ್​, ಸಿಗ್ನಲ್​ ದೀಪ, ಉಬ್ಬು ಮತ್ತು ನಾಮಫಲಕಗಳನ್ನು ಈ ಕೂಡಲೇ ಅಳವಡಿಸಿ ಅಪಘಾತಗಳನ್ನು ತಪ್ಪಿಸಬೇಕು" ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ಸಂಬಂಧ ದೊಡ್ಡ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಪಾಟ್ ಹೋಲ್ ಮಿಕ್ಸ್ ಆವಿಷ್ಕಾರ: ರಸ್ತೆಗಳ ಗುಂಡಿ ಮುಚ್ಚಲು ಬಂತು ಮತ್ತೊಂದು ನಾವೀನ್ಯ ಕಾಯಕಲ್ಪ

ABOUT THE AUTHOR

...view details