ಚಿಕ್ಕಮಗಳೂರು:ಈ ವರದಿ ನೋಡಿದರೆ ಯಾರಿಗೆ ಬಂತು, ಎಲ್ಲಿಗೆ ಬಂತು, 47ರ ಸ್ವಾತಂತ್ರ್ಯ ಎಂಬ ಪ್ರಶ್ನೆ ಮೂಡದೇ ಇರದು. ಏಕೆಂದರೆ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 77 ವರ್ಷಗಳೇ ಕಳೆದಿವೆ. ಇಡೀ ಜಗತ್ತೇ ಅಂಗೈಯಲ್ಲಿರುವಷ್ಟು ತಂತ್ರಜ್ಞಾನ ಮುಂದುವರಿದಿದೆ. ಡಿಜಿಟಲ್ ಜಗತ್ತು ಹೊಸ ಲೋಕವನ್ನೇ ಸೃಷ್ಟಿಸಿದ್ದು, ಭಾರತ ಚಂದ್ರನ ಮೇಲೂ ಹೆಜ್ಜೆ ಇಟ್ಟಿದೆ. ಆದರೆ, ಕಾಫಿನಾಡಿನ ಈ ಕುಗ್ರಾಮ ಮಾತ್ರ 77 ವರ್ಷಗಳಿಂದ ವಿದ್ಯುತ್ತನ್ನೇ ಕಂಡಿಲ್ಲ. ದಟ್ಟಕಾನನ ಮಧ್ಯೆಯ ಆ ಗ್ರಾಮ ಇನ್ನೂ ಕತ್ತಲ ಬದುಕಲ್ಲೇ ಬದುಕುತ್ತಿದೆ.
ಸ್ವಾತಂತ್ರ್ಯ ಬಂದು 77 ವರ್ಷ ಕಳೆದರೂ ವಿದ್ಯುತ್ತನ್ನೇ ಕಾಣದ ಗ್ರಾಮವಿದು (ETV Bharat) ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಉಸ್ತುವಾರಿ ಸಚಿವರಾಗಿರುವ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಕುದುರೆಮುಖ ತಪ್ಪಲಿನ ಗಡಿಯ ಸಂಸೆ ಸಮೀಪದಲ್ಲಿ ಸಿಂಗ್ಸಾರ ಗ್ರಾಮವಿದೆ. ಇಲ್ಲಿರೋದೇ ಮೂರೇ ಮೂರು ಕುಟುಂಬ. ಪದ್ಮಾವತಿ, ಕೆಂಚಮ್ಮ, ಭರಮಪ್ಪ ಎಂಬವರ ಮೂರು ಕುಟುಂಬಗಳ ಬದುಕಿನ ಕಥೆ - ವ್ಯಥೆ ಹೇಳ ತೀರದಾಗಿದೆ. ತಮ್ಮ ಪೂರ್ವಜರ ಕಾಲದಿಂದಲೂ ಇವರು ಇದೇ ಜಾಗದಲ್ಲಿ ವಾಸ ಮಾಡುತ್ತಿದ್ದಾರೆ. ಆದರೆ, ಇವರ ಬದುಕಿನ ವೇದನೆ-ರೋಧನೆ ಕೇಳುವವರಿಲ್ಲ.
ಒಂದೆಡೆ 77 ವರ್ಷಗಳಿಂದ ವಿದ್ಯುತ್ ನೋಡೇ ಇಲ್ಲವಾದರೆ, ಮತ್ತೊಂದೆಡೆ ಯಾರಿಗಾದರೂ ಫೋನ್ ಮಾಡಬೇಕಾದರೆ ನೆಟ್ವರ್ಕ್ ಕೂಡ ಸಿಗಲ್ಲ. ನೆಟ್ವರ್ಕ್ ಹುಡುಕಿಕೊಂಡು ಕುದುರೆಮುಖದ ಬಳಿ ಬರಬೇಕು. ಅಗತ್ಯ ಕೆಲಸಗಳಿಗೆ ಬೇರೆ ಊರುಗಳಿಗೆ ಹೋಗೋಕೆ ಸರಿಯಾದ ಬಸ್ ವ್ಯವಸ್ಥೆ ಕೂಡ ಇಲ್ಲ. ಅಧಿಕಾರಿಗಳ ಜೊತೆ ಕರೆಂಟ್ ಬಗ್ಗೆ ಕೇಳಿದರೆ ಬರುತ್ತೆ, ಬರುತ್ತೆ, ಅಂತ ಹೇಳುತ್ತಾರೆಯೇ ವಿನಃ ಇದುವರೆಗೆ ವಿದ್ಯುತ್ ವ್ಯವಸ್ಥೆ ಮಾತ್ರ ಬಂದೇ ಇಲ್ಲ.
ಸ್ವಾತಂತ್ರ್ಯ ಬಂದು 77 ವರ್ಷ ಕಳೆದರೂ ವಿದ್ಯುತ್ತನ್ನೇ ಕಾಣದ ಗ್ರಾಮವಿದು (ETV Bharat) "ದಶಕಗಳಿಂದ ಮೇಲಿಂದ ಮೇಲೆ ಮನವಿ ಮಾಡಿಕೊಂಡ ಹಿನ್ನೆಲೆ ಎರಡು ಬಲ್ಬ್ ಉರಿಯುವ ಸೋಲಾರ್ ವ್ಯವಸ್ಥೆ ಮಾಡಿ ಕೊಟ್ಟಿದ್ದಾರೆ. ಕರೆಂಟ್ ಬರುತ್ತೆ ಅಂತ ನಾವು ಟಿವಿ ಕೂಡ ತಂದಿಟ್ಟು ಕೊಂಡಿದ್ದೇವೆ. ಆದರೆ, ಕರೆಂಟ್ ಮಾತ್ರ ಬರಲೇ ಇಲ್ಲ. ಇರೋ ಎರಡು ಸೋಲಾರ್ ಬಲ್ಬ್ ಮಳೆಗಾಲದಲ್ಲಿ ಉರಿಯಲ್ಲ. ಸಂಜೆಯಾಗುತ್ತಿದ್ದಂತೆ ಆಫ್ ಆಗುತ್ತೆ. ನಮ್ಮನ್ನ ಇಲ್ಲಿಂದ ಸ್ಥಳಾಂತರಿಸಿ, ಸೂಕ್ತ ಪರಿಹಾರ ನೀಡಿ ನಾವು ಬೇರೆಡೆ ಹೋಗುತ್ತೇವೆ ಅಂದ್ರು ಸರ್ಕಾರ ಹಾಗೂ ಅಧಿಕಾರಿಗಳು ಮನವಿ ಸ್ಪಂದಿಸುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಜನ ಪ್ರತಿನಿಧಿಗಳು ಬಂದು ಮುಖ ತೋರಿಸುತ್ತಾರೆ. ಆ ಮೇಲೆ ಮತ್ತೆ ಈ ಕಡೆ ತಲೆ ಹಾಕಲ್ಲ. ಏಳು ದಶಕಗಳಿಂದ ಕರೆಂಟ್ ಇಲ್ಲದೇ ಕಾಡು - ಪ್ರಾಣಿ - ಮಳೆ ಮಧ್ಯೆಯೇ ಬದುಕುತ್ತಿದ್ದೇವೆ" ಎಂದು ಸ್ಥಳೀಯ ಮಂಜುನಾಥ್ ಅವರು, ದಶಕಗಳಿಂದ ಚುನಾವಣೆ ವೇಳೆ ಓಟು ಕೇಳೋಕೆ ಮಾತ್ರ ಬರುವ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
"ಈ ಬಾರಿಯ ಮಳೆಗಾಲದಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಇದ್ದ ಅಲ್ಪ-ಸ್ವಲ್ಪ ಅಡಕೆ ತೋಟವೂ ಹಾನಿಯಾಗಿದೆ. ಮತ್ತೊಂದೆಡೆ ಕಾಡು ಪ್ರಾಣಿಗಳ ಹಾವಳಿಯೂ ಮಿತಿ ಮೀರಿದೆ. ಈ ಮಧ್ಯೆ ಇರುವ ಸೂರು ಕೂಡ ಬೀಳುವ ಹಂತಕ್ಕೆ ತಲುಪಿದೆ. ಹೊಸ ಮನೆ ಕಟ್ಟೋಣವೆಂದರೆ ಅಧಿಕಾರಿಗಳು ಪರ್ಮಿಷನ್ ಕೊಡುತ್ತಿಲ್ಲ. ಮಕ್ಕಳನ್ನು ಶಾಲೆಗೆ ಕಳಿಸೋಕೆ ಭಯ. ಸರ್ಕಾರ ನಮಗೆ ಪರಿಹಾರ ಕೊಟ್ಟರೆ ನಾವು ಬೇರೆ ಕಡೆ ಸ್ಥಳಾಂತರವಾಗುತ್ತೇವೆ" ಎಂದು ಸ್ಥಳೀಯ ಗಿಡ್ಡ ಮನವಿ ಮಾಡಿದ್ದಾರೆ.
ಒಟ್ಟಾರೆ, ಈ ಮೂರು ಕುಟುಂಬಗಳು ಅಕ್ಷರಶಃ ನರಕ ಯಾತನೆ ಅನುಭವಿಸುತ್ತಿದ್ದು, ಸರ್ಕಾರ ಇವರ ಕಷ್ಟಕ್ಕೆ ಸ್ಪಂದಿಸಬೇಕಾಗಿದೆ.
ಇದನ್ನೂ ಓದಿ:ಮಳೆಗಾಲ ಬಂತೆಂದರೆ ಕೆರೆಯಂತಾಗುವ ಗ್ರಾಮ: ಸ್ಥಳೀಯರಿಗೆ ಗಂಜಿ ಕೇಂದ್ರಗಳೇ ಆಸರೆ! - Problem of Kachavi village