ಹಾವೇರಿ:ಹಾವೇರಿ ತಾಲೂಕು ಕನವಳ್ಳಿ ಗ್ರಾಮದ ಗುಡ್ಡಪ್ಪ ಸೊಟ್ಟಪ್ಪನವರ ಅವರದ್ದು ಮೂಲತಃ ಕೃಷಿ ಕುಟುಂಬ. ಆದರೆ 2005ರಲ್ಲಿ ನೀರಿನ ಅಭಾವದಿಂದ ಕೃಷಿ ತೊರೆದ ಗುಡ್ಡಪ್ಪ ಮುಖಮಾಡಿದ್ದು ಎನ್‌ಜಿಓದತ್ತ. ಎನ್‌ಜಿಓದಲ್ಲಿ ಸಾಕಷ್ಟು ವಿಷಯ ತಿಳಿದುಕೊಂಡ ಗುಡ್ಡಪ್ಪ ಅವರು ಹಲವು ರೈತರಿಗೆ ದೀರ್ಘಾವದಿ ಬೆಳೆಗಳ ಬಗ್ಗೆ ಹಲವರಿಗೆ ಮಾಹಿತಿ ನೀಡಿದರು.
ಇದರ ಮಧ್ಯೆ ಬೇರೆಯವರಿಗೆ ಹೇಳುವುದಕ್ಕಿಂತ ತಾವೇ ಮಾಡಿದರೆ ಹೇಗೆ ಎಂಬ ವಿಚಾರ ಬಂತು. 2022 ಎನ್‌ಜಿಓದಲ್ಲಿ ಇದ್ದುಕೊಂಡೇ ಗುಡ್ಡಪ್ಪ ಮತ್ತೆ ಕೃಷಿ ಕಡೆ ಮುಖಮಾಡಿದರು. ತಮಗೆ ಬಂದ ಎರಡು ಎಕರೆ ಜಮೀನಿನಲ್ಲಿ ತೋಟಗಾರಿಕೆ ಬೆಳೆ ಬೆಳೆಯಲು ಮುಂದಾದರು. ಅತಿಹೆಚ್ಚು ಹಣ್ಣು ಬೆಳೆಯುವ ಬೆಳೆಗಳ ಕಡೆ ಗಮನ ನೀಡಿರುವ ಅವರು ಆರಂಭದಲ್ಲಿ ಅರ್ಧ ಎಕರೆಯಲ್ಲಿ ಡ್ರ್ಯಾಗನ್ ಫ್ರೂಟ್ಸ್ ಬೆಳೆಯಲು ಮುಂದಾದರು. ಆದಾದ ನಂತರ ಪೇರಲ, ಚಿಕ್ಕು, ಮಾವು, ನೇರಳೆ, ಪಪ್ಪಾಯಿ, ಅಂಜೂರ, ಬಟರ್ ಫ್ರೂಟ್ಸ್, ಮೋಸಂಬಿ, ಕಿತ್ತಳೆ, ನಿಂಬೆ, ಹುಣಸೆ, ಕಾಡುನೆಲ್ಲಿ, ಸೀತಾಫಲ, ಗೋಡಂಬಿ ಮರ ಸೇರಿದಂತೆ ಸುಮಾರು 15ಕ್ಕೂ ಅಧಿಕ ಹಣ್ಣಿನ ತಳಿಯ ಸಸಿಗಳನ್ನು ನೆಟ್ಟಿದ್ದಾರೆ.
ಮೊದಲ ಎರಡು ಬೆಳೆಗಳಲ್ಲೇ ಮಾಡಿದ ಖರ್ಚು ಕೈಸೇರಿತು: ಅದರಲ್ಲಿ ಮಳೆಗಾಲದಲ್ಲಿ ಒಂದು ಬಾರಿ ಡ್ರ್ಯಾಗನ್ ಫ್ರೂಟ್ಸ್ ಇಳುವರಿ ಕಟಾವ್ ಮಾಡಿದ್ದಾರೆ. ಜೊತೆ ಜೊತೆಗೆ ಪೇರಲ ಸಹ ಕಟಾವ್ ಮಾಡಿ ಸುಮಾರು 50ಕ್ವಿಂಟಾಲ್ ಹಣ್ಣು ಮಾರಿದ್ದಾರೆ. ಈ ವರ್ಷ ಪೇರಲ ವರ್ತಕರಿಗೆ ಒಂದು ಎಕರೆಯಲ್ಲಿರುವ ಪೇರಲವನ್ನು ಐದು ತಿಂಗಳು ಗುತ್ತಿಗೆ ನೀಡಿದ್ದಾರೆ. ಸುಮಾರು 2 ಲಕ್ಷ 25 ಸಾವಿರ ರೂಪಾಯಿಗೆ ಪೇರಲ ತೋಟವನ್ನು ಐದು ತಿಂಗಳು ಗುತ್ತಿಗೆ ನೀಡಿದ್ದಾರೆ. ಡ್ರ್ಯಾಗನ್ ಫ್ರೂಟ್ಸ್ ಮೊದಲ ಇಳುವರಿ ಬಂದಿದ್ದು ಅದರಿಂದ ಸುಮಾರು ಒಂದು ಲಕ್ಷ ರೂಪಾಯಿ ಆದಾಯ ಪಡೆದಿದ್ದಾರೆ.
ಸದ್ಯ ತಾವು ತೋಟಕ್ಕೆ ಮಾಡಿದ ಐದು ಲಕ್ಷ ರೂಪಾಯಿ ಖರ್ಚು ಮೊದಲ ಎರಡು ಬೆಳೆಗಳಲ್ಲೇ ವಾಪಸ್ ಬಂದಿದೆ. ಇನ್ಮುಂದೆ ಬರುವುದೆಲ್ಲವೂ ಲಾಭವೇ ಎನ್ನುತ್ತಾರೆ ಗುಡ್ಡಪ್ಪ. ಪೇರಲದಲ್ಲಿ ನಾಲ್ಕು ತಳಿಗಳನ್ನು ನಾಟಿ ಮಾಡಿದ್ದಾರೆ. ಥೈವಾನ್ ಪಿಂಕ್, ಥೈವಾನ್ ವೈಟ್, ಅಲಹಾಬಾದ್ ಸಪೇದ್ ಮತ್ತು ಎಲ್ ಫಾರ್ಟಿನೈನ್ ತಳಿಯ ಪೇರಲ ಬೆಳೆದಿರುವದು ಇವರ ವಿಶೇಷ. ನಮ್ಮ ಭೂಮಿಯಲ್ಲಿ ಯಾವೆಲ್ಲಾ ಹಣ್ಣುಗಳನ್ನು ಬೆಳೆಯಬಹುದೋ ಆ ಎಲ್ಲ ಹಣ್ಣಿನ ಗಿಡಗಳನ್ನು ಬೆಳೆಯಬೇಕು ಎನ್ನುವುದು ಗುಡ್ಡಪ್ಪ ಅವರ ಕನಸು. ಈ ಪೇರಲ ಮಧ್ಯ ಅಡಿಕೆ ಮರಗಳನ್ನು ಸಹ ಹಚ್ಚಿದ್ದು ಅವುಗಳು ಸಹ ಚೆನ್ನಾಗಿ ಬೆಳೆದು ನಿಂತಿವೆ.