ಹಾವೇರಿ : ಜಿಲ್ಲೆಯಾದ್ಯಂತ ಸಡಗರ, ಸಂಭ್ರಮ, ಭಕ್ತಿಯಿಂದ ವೈಕುಂಠ ಏಕಾದಶಿ ಆಚರಿಸಲಾಯಿತು. ವೆಂಕಟೇಶ್ವರ ದೇವಸ್ಥಾನಗಳಲ್ಲಿ ವಿಶೇಷವಾದ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.
ಹಾವೇರಿಯ ನಾಗೇಂದ್ರನಮಟ್ಟಿಯಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯನ್ನ ವಿಶಿಷ್ಠವಾಗಿ ಆಚರಿಸಲಾಯಿತು. ವೆಂಕಟೇಶ್ವರ ದೇವಸ್ಥಾನದ ವೈಕುಂಠದ ಪ್ರತಿರೂಪವನ್ನ ಸೃಷ್ಠಿಸಲಾಗಿತ್ತು. ಮುಂಜಾನೆ ವೆಂಕಟೇಶ್ವರ ಮೂರ್ತಿಗೆ 16 ದ್ರವ್ಯಗಳಿಂದ ಮಹಾಭಿಷೇಕ ನಡೆಸಲಾಯಿತು.
8 ಗಂಟೆಗೆ ಗರ್ಭಗುಡಿಯಲ್ಲಿರುವ ವೆಂಕಟೇಶ್ವರನಿಗೆ ತುಳಸಿ ಅರ್ಪಣೆ ಮಾಡಿ, ಪಲ್ಲಕ್ಕಿಯೊಂದಿಗೆ ಮೂರ್ತಿಯ ಪ್ರದಕ್ಷಿಣೆ ಹಾಕಿಸಲಾಯಿತು. ವೈಕುಂಠ ಮಹಾದ್ವಾರ ನಿರ್ಮಿಸಿ ಶ್ರೀದೇವಿ ಭೂದೇವಿ ಸಹಿತ ವೆಂಕಟೇಶ್ವರ ಸ್ವಾಮಿಯ ಚರಪ್ರತಿಷ್ಠಾಪನೆ ಮಾಡಲಾಯಿತು. ಮುಂಜಾನೆ 10 ಗಂಟೆಯಿಂದ ಆರಂಭವಾದ ಸಾರ್ವಜನಿಕ ದರ್ಶನ ಸಂಜೆವರೆಗೆ ನಡೆಯಿತು.
ಸಾವಿರಾರು ಭಕ್ತರಿಂದ ಪೂಜೆ ಸಲ್ಲಿಕೆ:ಹಾವೇರಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಭಕ್ತರು ವೆಂಕಟೇಶ್ವರ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಸರತಿಯಲ್ಲಿ ನಿಂತು ವೆಂಕಟೇಶ್ವರನ ದರ್ಶನ ಪಡೆದು ಪುನೀತರಾದರು. ಬಂದ ಭಕ್ತರಿಗೆ ದೇವಸ್ಥಾನದ ಆಡಳಿತ ಮಂಡಳಿ ಪ್ರಸಾದ ಮತ್ತು ಲಡ್ಡು ವಿತರಿಸಿತು. ಅಲ್ಲದೆ ಮಹಿಳೆಯರಿಗೆ ಉಡಿತುಂಬಿ ಸತ್ಕರಿಸಲಾಯಿತು. ವೈಕುಂಠ ಏಕಾದಶಿ ಅಂಗವಾಗಿ ದೇವಸ್ಥಾನದಲ್ಲಿ ಭಜನೆ ವ್ಯವಸ್ಥೆ ಮಾಡಲಾಗಿತ್ತು.
ಈ ಕುರಿತು ದೇವಸ್ಥಾನದ ಅರ್ಚಕ ಕಿಶೋರ ಕುಲಕರ್ಣಿ ಅವರು ಮಾತನಾಡಿ, ''ವೈಕುಂಠ ಏಕಾದಶಿ ಅಂಗವಾಗಿ ಮುಂಜಾನೆಯಿಂದಲೇ ವಿವಿಧ ದ್ರವ್ಯಗಳಿಂದ ಅಭಿಷೇಕ ಸಲ್ಲಿಸಿ ಪೂಜೆ ಸಲ್ಲಿಸಿದ್ದೇವೆ. ತಿರುಪತಿಯಲ್ಲಿನ ವೆಂಕಟಸ್ವಾಮಿಗೆ ಯಾವ ರೀತಿ ಅಲಂಕಾರ ಮಾಡಲಾಗುತ್ತೋ ಅದೇ ರೀತಿ ವೆಂಕಟೇಶ್ವರನಿಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗಿದೆ. ಕಳೆದ ಐದು ವರ್ಷಗಳಿಂದ ನಾಗೇಂದ್ರಮಟ್ಟಿಯಲ್ಲಿ ವಿಜೃಂಭಣೆಯಿಂದ ವೈಕುಂಠ ಏಕಾದಶಿ ಆಚರಿಸಿಕೊಂಡು ಬರುತ್ತಿದ್ದೇವೆ. ಉತ್ತರಾಭಿಮುಖವಾಗಿ ವೈಕುಂಠದ್ವಾರ ಮಾಡಲಾಗಿದ್ದು, ಭಕ್ತರು ಅದರಲ್ಲಿ ಪ್ರವೇಶಿಸಿ ಕೃತಾರ್ಥರಾಗುತ್ತಾರೆ'' ಎಂದು ತಿಳಿಸಿದರು.