ಬೆಂಗಳೂರು: ಕಿಲ್ಲರ್ ಎಂದೇ ಹಣೆಪಟ್ಟಿ ಹೊತ್ತಿಕೊಂಡಿದ್ದ ಬಿಎಂಟಿಸಿ ಬಸ್ ಇದೀಗ ಆರೋಪದಿಂದ ವಿಮುಕ್ತಗೊಂಡಿದೆ. ಸಂಚಾರ ಪೊಲೀಸರ ನಿರಂತರ ತರಬೇತಿ ಹಿನ್ನೆಲೆಯಲ್ಲಿ ಸರ್ಕಾರಿ ಬಸ್ಗಳಿಂದ ನಗರದಲ್ಲಿ ಸಂಭವಿಸುತ್ತಿದ್ದ ಅಪಘಾತ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ. ಟ್ರಾಫಿಕ್ ಪೊಲೀಸರು ಚಾಲಕರಿಗೆ ಸುರಕ್ಷಿತ ಬಸ್ ಚಾಲನೆ ಬಗ್ಗೆ ತರಬೇತಿ ನೀಡುತ್ತಿರುವ ಪರಿಣಾಮ ಈ ವರ್ಷ 4 ಅಪಘಾತ ಪ್ರಕರಣಗಳು ದಾಖಲಾಗಿರುವುದು ಹೊರತುಪಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತ ಪ್ರಕರಣಗಳು ದಾಖಲಾಗಿಲ್ಲ.
ಈ ಹಿಂದೆ ಸರಿಯಾದ ನಿರ್ವಹಣೆ ಇಲ್ಲದೆ, ಬ್ರೇಕ್ಗಳು ಸರಿ ಇರದ ಕಾರಣ ಬಸ್ಗಳಿಂದ ಅಪಘಾತವಾಗುತ್ತಿದೆ ಎಂಬ ದೂರುಗಳು ಕೇಳಿಬಂದಿತ್ತು. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದಿದ್ದರೂ ಅಪಘಾತಗಳ ಸಂಖ್ಯೆ ಕಡಿಮೆಯಾಗಿರಲಿಲ್ಲ. ಈ ಬಗ್ಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ನಗರದಲ್ಲಿ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿಯಲ್ಲಿ ಕೆಲಸ ಮಾಡುವ ಸಾವಿರಾರು ಸಂಖ್ಯೆಯ ಚಾಲಕರು, ನಿರ್ವಾಹಕರಿಗೆ ಸಂಚಾರಿ ಪೊಲೀಸರು ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್ನಲ್ಲಿ ತರಬೇತಿ ನೀಡುತ್ತಿದ್ದಾರೆ.
ತರಬೇತಿ ಸಮಯದಲ್ಲಿ ಚಾಲಕರು ಹಾಗೂ ನಿರ್ವಾಹಕರು ಮುಖ್ಯವಾಗಿ ಸಮಯ ನಿರ್ವಹಣೆ ಸಮಸ್ಯೆ, ಸರಿಯಾದ ಸಮಯದಲ್ಲಿ ನಿಗದಿಯಾದ ಸ್ಥಳಕ್ಕೆ ಹೋಗಬೇಕು, ಸರಿಯಾದ ವಿಶ್ರಾಂತಿ ಇಲ್ಲದಿರುವುದು, ಸುಮಾರು ದಿನಕ್ಕೆ 10-12 ಗಂಟೆಗಳ ಕಾಲ ಕರ್ತವ್ಯ ನಿರ್ವಹಣೆ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಆಳಲು ತೊಂಡಿಕೊಂಡಿದ್ದರು. ಇದಕ್ಕೆ ಪರಿಹಾರ ಎಂಬಂತೆ ಒತ್ತಡ ಸಂದರ್ಭದಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು. ಜಾಗರೂಕತೆಯಿಂದ ಹೇಗೆ ವಾಹನ ಚಲಾಯಿಸಬೇಕು. ರಸ್ತೆ ತಿರುವುಗಳಲ್ಲಿ ಯಾವ ರೀತಿ ಮುಂಜಾಗ್ರತೆ ತೆಗೆದುಕೊಳ್ಳಬೇಕು ಎಂಬುದರ ಸಂಪೂರ್ಣ ತರಬೇತಿ ಚಾಲಕರಿಗೆ ನೀಡಲಾಗಿದೆ.
ಇನ್ನು ಅಪಘಾತಗಳು ಹೆಚ್ಚಾಗಿ ಸಂಜೆ ಹಾಗೂ ಮುಂಜಾನೆ ವೇಳೆಯೇ ಘಟಿಸುತ್ತಿದ್ದು, ಆ ಸಂದರ್ಭದಲ್ಲಿ ಬಸ್ ಚಾಲಕರು ಯಾವ ರೀತಿ ಎಚ್ಚರಿಕೆಯಿಂದಿರಬೇಕು ಎಂಬುದನ್ನೂ ತರಬೇತಿಯಲ್ಲಿ ಹೇಳಿಕೊಡಲಾಗಿದೆ. ಈ ತರಬೇತಿಯಿಂದ ಅಪಘಾತ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿದೆ.