ಬೆಟ್ಟಿಂಗ್, ಶೋಕಿಗಾಗಿ ಮನೆಗಳ್ಳತನಕ್ಕಿಳಿದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಅಂದರ್ ಬೆಂಗಳೂರು:ಬೆಟ್ಟಿಂಗ್ ಹಾಗೂ ಶೋಕಿ ಜೀವನದ ಗೀಳಿಗೆ ಬಿದ್ದು ಕಳ್ಳತನದ ಹಾದಿ ಹಿಡಿದಿದ್ದ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಮೈಕೋ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸುನಿಲ್ ಬಂಧಿತ ಆರೋಪಿಯಾಗಿದ್ದು, ಆತನಿಂದ 30.15 ಲಕ್ಷ ಮೌಲ್ಯದ ಕಳವು ಮಾಡಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮದಲ್ಲಿದ್ದ ಆರೋಪಿ, ಬೆಟ್ಟಿಂಗ್ ಹಾಗೂ ಶೋಕಿ ಜೀವನದ ಆಸೆಗಾಗಿ ಅಡ್ಡದಾರಿ ಹಿಡಿದಿದ್ದ. ಇದಕ್ಕಾಗಿ ಸಿಸಿಟಿವಿ ಕ್ಯಾಮೆರಾಗಳು ಇರದ ಪ್ರದೇಶಗಳ ಮನೆಗಳ ಬೀಗ ಮುರಿದು ಚಿನ್ನಾಭರಣ ಕಳವು ಮಾಡಲಾರಂಭಿಸಿದ್ದ. ಹೊಸ ಕಳ್ಳನಾಗಿರುವುದರಿಂದ ಬರೋಬ್ಬರಿ 11 ಮನೆಗಳ್ಳತನದಲ್ಲಿ ಭಾಗಿಯಾದರೂ ಸಹ ಪೊಲೀಸರಿಗೆ ಆರೋಪಿ ಬಗ್ಗೆ ಸುಳಿವು ಸಿಕ್ಕಿರಲಿಲ್ಲ.
ಇತ್ತೀಚೆಗೆ ಬ್ಯಾಚುಲರ್ ಹುಡುಗರಿದ್ದ ಬಾಡಿಗೆ ಮನೆಗೆ ನುಗ್ಗಿದ್ದ ಆರೋಪಿ ಮೊಬೈಲ್ ಕದ್ದು ಪರಾರಿಯಾಗುವಾಗ ಮನೆ ಮಾಲೀಕರು ಆರೋಪಿಯ ಫೋಟೋ ಕ್ಲಿಕ್ಲಿಸಿಕೊಂಡಿದ್ದರು. ಆ ಫೋಟೋ ಆಧಾರದಲ್ಲಿ ಆರೋಪಿಯನ್ನ ಪತ್ತೆ ಹಚ್ಚಿದಾಗ ಆರೋಪಿಯ ಕಳ್ಳತನ ಪ್ರಕರಣಗಳು ಬಯಲಾಗಿವೆ.
ಆರೋಪಿ ಬಂಧನದಿಂದ ಸುಮಾರು 11 ಮನೆಗಳ್ಳತನ ಪ್ರಕರಣಗಳ ಮಾಹಿತಿ ಬಯಲಾಗಿವೆ. ಆತನಿಂದ 525 ಗ್ರಾಂ ತೂಕದ ಚಿನ್ನಾಭರಣ, 550 ಗ್ರಾಂ ತೂಕದ ಬೆಳ್ಳಿ ವಸ್ತುಗಳು, ಎರಡು ಮೊಬೈಲ್ ಫೋನ್‌ಗಳು, ಕೃತ್ಯಕ್ಕೆ ಬಳಸುತ್ತಿದ್ದ ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಇದನ್ನೂ ಓದಿ:ಷೇರು ಮಾರುಕಟ್ಟೆಯಲ್ಲಿ ಹೆಚ್ಚು ಹಣ ಗಳಿಸುವ ಆಮಿಷ: ಧಾರವಾಡ ಮಹಿಳೆಗೆ 23 ಲಕ್ಷ ವಂಚನೆ