ಬೆಂಗಳೂರು:ನಕಲಿ ದಾಖಲಾತಿ ಸೃಷ್ಟಿಸಿ ಸುಮಾರು 224 ವರ್ಷಗಳ ಹಿಂದಿನ ಬ್ರಿಟಿಷ್ ಕಾಲದ ಪಾರಂಪರಿಕ ಕಟ್ಟಡವನ್ನು ಕೆಡವಿ ಜಾಗ ಅತಿಕ್ರಮಿಸಲು ಯತ್ನಿಸಿದ್ದ ಆರೋಪಿಯು ಬಾಗಲೂರು ಠಾಣೆ ಪೊಲೀಸರಿಗೆ ಸಿಕ್ಕಿಬಿದಿದ್ದಾನೆ. ಕೆಂಗೇರಿಯಲ್ಲಿ ವಾಸವಾಗಿರುವ ಗಣೇಶ್ (47) ಬಂಧಿತ ಆರೋಪಿ. ಆತನ ಪೊಲೀಸ್ ಕಸ್ಟಡಿ ಇಂದು ಅಂತ್ಯಗೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ತಮ್ಮ ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಬಂಧಿತನಿಂದ ನಕಲಿ ದಾಖಲಾತಿ ಪತ್ರಗಳು ಹಾಗೂ ಕಟ್ಟಡ ಕೆಡವಲು ಬಳಸಿದ್ದ ಜೆಸಿಬಿ ವಾಹನವನ್ನು ವಶಕ್ಕೆ ಪಡೆದುಕೊಂಡು ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ.
ಕೆಂಗೇರಿಯ ವಲ್ಲಗೆರೆಹಳ್ಳಿಯ ಅಪಾರ್ಟ್ಮೆಂಟ್ವೊಂದರಲ್ಲಿ ಪತ್ನಿ, ಮಕ್ಕಳೊಂದಿಗೆ ವಾಸವಾಗಿರುವ ಗಣೇಶ್, ನಗರದಲ್ಲಿ ಎಲ್ಲೆಲ್ಲಿ ಖಾಲಿ ಜಾಗವಿರುವ ಬಗ್ಗೆ ಆನ್ಲೈನ್ ಮುಖಾಂತರ ತಿಳಿದುಕೊಂಡು ಆ ಜಾಗದ ಮಾಲೀಕರು ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಲು ಆರ್ಟಿಐ ಮೊರೆ ಹೋಗುತ್ತಿದ್ದ. ಕಣ್ಣೂರಿನಲ್ಲಿರುವ ಪಾರಂಪರಿಕ ಸರ್ವೇ ಪಾಯಿಂಟ್ ಕಟ್ಟಡ ಜಾಗದ ಮೇಲೆ ಕಣ್ಣು ಹಾಕಿದ್ದ. ಈ ಜಾಗಕ್ಕೆ ಮಾಲೀಕರು ಇಲ್ಲದಿರುವುದನ್ನ ಖಚಿತಪಡಿಸಿಕೊಂಡಿದ್ದ. ಅಲ್ಲದೇ ಕಣ್ಣೂರಿನಲ್ಲಿ ಪಾರಂಪರಿಕ ಕಟ್ಟಡದ ಮಾಲೀಕತ್ವದ ಬಗ್ಗೆ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಆರ್ಟಿಐ ಮೂಲಕ ಪ್ರಶ್ನಿಸಿದ್ದ. ಇಲಾಖೆಯು ತಮ್ಮ ಅಧೀನದಲ್ಲಿ ಕಣ್ಣೂರಿನಲ್ಲಿ ಕಟ್ಟಡವಿಲ್ಲ ಎಂದು ಉತ್ತರಿಸಿರುವುದಾಗಿ ಆರೋಪಿ ಪೊಲೀಸರು ಮುಂದೆ ಹೇಳಿದ್ದಾನೆ.
ಪಾರಂಪರಿಕ ಕಟ್ಟಡವಿರುವುದನ್ನ ಅರಿತು 2021ರಲ್ಲಿ ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ ಸಂಸ್ಥೆಯು ಈ ಕಟ್ಟಡ ನಿರ್ವಹಿಸಿತ್ತು. ತದನಂತರ ಸೂಕ್ತ ನಿರ್ವಹಣೆ ಕೊರತೆಯಿಂದಾಗಿ ಪಾಳುಬಿದ್ದ ಜಾಗದಂತಾಗಿತ್ತು. ಇದನ್ನ ಅರಿತ ಆರೋಪಿಯು ಕಟ್ಟಡದ ಸುತ್ತಮುತ್ತಲಿನ 7 ಗುಂಟೆ ಜಾಗವನ್ನ ತಮ್ಮ ವಶಕ್ಕೆ ಪಡೆಯಲು ವ್ಯೂಹ ರಚಿಸಿದ್ದ. ಇದಕ್ಕೆ ಪೂರಕವಾಗಿ ನಕಲಿ ದಾಖಲಾತಿಗಳನ್ನ ಸೃಷ್ಟಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
1981ರಲ್ಲಿ ಆರೋಪಿಯು ತನ್ನ ತಂದೆ ನಾಗರಾಜ್ಗೆ ಧರ್ಮರಾಜ್ ಎಂಬುವರಿಂದ 7 ಗುಂಟೆ ಜಾಗವನ್ನು ಖರೀದಿಸಿರುವ ಹಾಗೆ ಸೆಲ್ ಡೀಡ್ ಸೃಷ್ಟಿಸಿದ್ದ. ತದನಂತರ ತಂದೆಯಿಂದ ತನಗೆ ಬಂದಿರುವ ರೀತಿ ನಕಲಿ ಗಿಫ್ಟ್ ಡೀಡ್ ಪತ್ರವನ್ನ ಹುಟ್ಟುಹಾಕಿದ್ದ. ಇದೇ ದಾಖಲಾತಿ ಆಧರಿಸಿ ಕಳೆದ ಜೂನ್ 5ರಂದು ಸ್ಥಳಕ್ಕೆ ಹೋಗಿ ಜೆಸಿಬಿ ಮೂಲಕ ಕಟ್ಟಡ ಕೆಡವಿಸಿದ್ದ. ಸ್ಥಳೀಯರು ಪ್ರಶ್ನಿಸಿದ್ದಕ್ಕೆ ತಾನು ವಕೀಲನಾಗಿದ್ದು, ಈ ಜಾಗದ ಅಸಲಿ ಮಾಲೀಕ ತಾನು ಎಂದು ಹೇಳಿಕೊಂಡಿದ್ದ.