ಕರ್ನಾಟಕ

karnataka

ETV Bharat / state

ಸೆವೋಪ್ಲೋರೆನ್ ಅನಸ್ತೇಶಿಯಾ ನೀಡಿ ಪತ್ನಿ ಕೊಲೆ ಪ್ರಕರಣ; ಗಂಡನಿಗೆ ಜೀವಾವಧಿ ಶಿಕ್ಷೆ, 1 ಲಕ್ಷ ದಂಡ ವಿಧಿಸಿದ ದಾವಣಗೆರೆ ಕೋರ್ಟ್​

ಪತ್ನಿಯನ್ನು ಕೊಲೆ ಮಾಡಿದ ಆರೋಪಿಗೆ ದಾವಣಗೆರೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ ದಂಡ ವಿಧಿಸಿದೆ.

ದಾವಣಗೆರೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ
ದಾವಣಗೆರೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ETV Bharat)

By ETV Bharat Karnataka Team

Published : Nov 26, 2024, 4:59 PM IST

ದಾವಣಗೆರೆ: ಪತ್ನಿ ಕೊಲೆ ಮಾಡಿದ ಪತಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರಾಗೃಹ ಶಿಕ್ಷೆ ಹಾಗೂ ಒಂದು ಲಕ್ಷ ರೂ ದಂಡ ವಿಧಿಸಿ ಆದೇಶಿಸಿದೆ. ಮಹದೇವ ಅಲಿಯಾಸ್ ಮಹಾದೇವಪ್ಪ ಶಿಕ್ಷೆಗೆ ಗುರಿಯಾದ ಆರೋಪಿ.

ಪ್ರಕರಣದ ಹಿನ್ನೆಲೆ ಏನು?:ಎ.ಜಿ.ಶೈಲಾ ಎಂಬುವವರನ್ನು ಕೊರಟಿಗೆರೆ ಗ್ರಾಮದ ಕೆ.ಎಸ್.ಮಹದೇವನ ಜೊತೆ ವಿವಾಹ ಮಾಡಿಸಲಾಗಿತ್ತು. ಆದರೆ ಮಹದೇವ ಪತ್ನಿಯೊಂದಿಗೆ ಸರಿಯಾಗಿ ಜೀವನ ನಡೆಸದೇ ದೈಹಿಕ, ಮಾನಸಿಕ ಕಿರುಕುಳ ನೀಡುತ್ತಿದ್ದ. 15/10/2014 ರಂದು ವಿಷ ಆಹಾರ ತಿನ್ನಿಸಿ ಉದ್ದೇಶ ಪೂರ್ವಕವಾಗಿ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಮೃತಳ ಸಂಬಂಧಿಕರು ದೂರು ನೀಡಿದ್ದರು.

ಈ ದೂರಿನ ಮೇರೆಗೆ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿಯಾಗಿದ್ದ ಸಬ್​ಇನ್ಸ್​ಪೆಕ್ಟರ್​ ಪಂಪಾಪತಿ ಎಂ.ಜಿ ತನಿಖೆ ಕೈಗೊಂಡಿದ್ದರು.‌ ಆರೋಪಿ ಮಹಾದೇವ್ ಪತ್ನಿ ಶೈಲಾಗೆ ಸೆವೋಪ್ಲೋರೆನ್ ಅನಸ್ತೇಶಿಯಾ ಪ್ರಯೋಗಿಸಿ ಕೈಯಿಂದ ಅವಳ ಮೂಗನ್ನು ಒತ್ತಿ ಹಿಡಿದು, ಉಸಿರುಕಟ್ಟಿಸಿ ಸಾಯಿಸಿರುವುದು ತನಿಖೆಯಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು.

ದಾವಣಗೆರೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಅವರು ಆರೋಪಿ ಕೆ.ಎಸ್. ಮಹದೇವನ ಮೇಲೆನ ಆರೋಪ ಸಾಬೀತಾಗಿದ್ದರಿಂದ ಜೀವಾವಧಿ ಶಿಕ್ಷೆ ಮತ್ತು 1 ಲಕ್ಷ ರೂ ದಂಡ ವಿಧಿಸಿ ಆದೇಶಿಸಿದ್ದಾರೆ.

ಅಲ್ಲದೇ, ದಂಡದ ಮೊತ್ತದಲ್ಲಿ 80 ಸಾವಿರ ರೂ ಹಣವನ್ನು ಮೃತಳ ಪೋಷಕರಿಗೆ ನೀಡುವಂತೆ ಹಾಗೂ ಉಳಿದ 20 ಸಾವಿರ ರೂ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸರ್ಕಾರಕ್ಕೆ ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ ಮೃತ ಶೈಲಾ ಅವರ ಪರವಾಗಿ ಸರ್ಕಾರಿ ವಕೀಲರಾದ ಮಂಜುನಾಥ್ .ಬಿ ಅವರು ವಾದ ಮಂಡಿಸಿದ್ದರು.

ಇದನ್ನೂ ಓದಿ:ಸಿದ್ದಾಪುರದಲ್ಲಿ 8 ವರ್ಷದ ಹಿಂದೆ ಕೊಲೆ; ತಲೆ ಮರೆಸಿಕೊಂಡಿದ್ದ ಆರೋಪಿ ಕೊನೆಗೂ ಪೊಲೀಸ್ ಬಲೆಗೆ

ABOUT THE AUTHOR

...view details