ಕಡಬ(ದಕ್ಷಿಣ ಕನ್ನಡ):ಕುಮಾರಧಾರ ನದಿಗೆ ಆತ್ಮಹತ್ಯೆಗೆಂದು ಹಾರಿದ ವ್ಯಕ್ತಿಯನ್ನು ಪೊಲೀಸರು, ಅಗ್ನಿಶಾಮಕ ದಳ ಹಾಗು ಶೌರ್ಯ ತಂಡದ ಸದಸ್ಯರು ರಕ್ಷಿಸಿರುವ ಘಟನೆ ಇಂದು ಬೆಳಗ್ಗೆ ಕೋಡಿಂಬಾಳ ಗ್ರಾಮದ ಪುಳಿಕ್ಕುಕ್ಕು ಎಂಬಲ್ಲಿ ನಡೆದಿದೆ.
ಆಂಧ್ರ ಪ್ರದೇಶದ ಮಡಕಸಿರ ನಿವಾಸಿ ಪ್ರಸ್ತುತ ಬೆಂಗಳೂರು ಮಾರತಹಳ್ಳಿಯಲ್ಲಿ ವಾಸವಿರುವ ರವಿ ಕುಮಾರ್ (40) ಕೈ ಕೊಯ್ದುಕೊಂಡು ನದಿಗೆ ಹಾರಿ ಆತ್ಮಹತ್ಯೆ ಮಾಡಲು ಯತ್ನಿಸಿದ್ದಾನೆ. ನದಿಯ ಮಧ್ಯ ಭಾಗದ ಪೊದೆಯೊಂದರಲ್ಲಿ ಸಿಲುಕಿಕೊಂಡಿದ್ದ ಈತ ತನ್ನನ್ನು ರಕ್ಷಣೆ ಮಾಡುವಂತೆ ಅಂಗಲಾಚಿದ್ದಾನೆ. ಕಿರುಚಾಟ ಕೇಳಿಸಿಕೊಂಡ ಸ್ಧಳೀಯರು ಕಡಬ ಠಾಣಾಧಿಕಾರಿ ಅಭಿನಂದನ್ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅಗ್ನಿ ಶಾಮಕ ದಳ ಮತ್ತು ಸ್ಥಳೀಯ ಶೌರ್ಯ ತಂಡ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.
ನದಿಗೆ ಹಾರಲು ಕಾರಣ?:ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ನಷ್ಟ ಉಂಟಾಗಿತ್ತು. ಹೀಗಾಗಿ ಸುಮಾರು ಎರಡು ಲಕ್ಷ ರೂ ಸಾಲ ಮಾಡಿದ್ದೆ. ಮನನೊಂದು ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ದೇವರ ದರ್ಶನ ಮುಗಿಸಿ ಕಡಬ-ಪಂಜ ರಸ್ತೆಯ ಪುಳಿಕುಕ್ಕು ಎಂಬಲ್ಲಿಗೆ ಬಂದೆ. ಸೋಮವಾರ ಮುಂಜಾನೆ 5ರ ಸುಮಾರಿಗೆ ಬ್ಯಾಗನ್ನು ಬಸ್ ನಿಲ್ದಾಣದಲ್ಲೇ ಇರಿಸಿ ಕೈಯನ್ನು ಆಯುಧದಿಂದ ಗಾಯಗೊಳಿಸಿ ನದಿಗೆ ಹಾರಿದೆ ಎಂದು ವಿಚಾರಣೆ ವೇಳೆ ರವಿ ಕುಮಾರ್ ಪೊಲೀಸರಿಗೆ ತಿಳಿಸಿದ್ದಾನೆ.