ಗಂಗಾವಳಿ ನದಿ ದಡದಲ್ಲಿ ಲಾರಿ ಅವಶೇಷ ಪತ್ತೆ (ETV Bharat) ಕಾರವಾರ (ಉತ್ತರ ಕನ್ನಡ) : ಶಿರೂರು ಗುಡ್ಡ ಕುಸಿತದಿಂದಾಗಿ ಕಳೆದ ಒಂಬತ್ತು ದಿನಗಳಿಂದ ನಾಪತ್ತೆಯಾಗಿದ್ದ ಲಾರಿ ಕೊನೆಗೂ ಪತ್ತೆಯಾಗಿದೆ. ಪೋಕ್ ಲೈನ್ ಕಾರ್ಯಾಚರಣೆ ವೇಳೆ ಲಾರಿಯ ಅವಶೇಷಗಳು ಮಣ್ಣಿನಡಿ ಸಿಕ್ಕಿವೆ ಎಂದು ಶಾಸಕ ಸತೀಶ್ ಸೈಲ್ ತಿಳಿಸಿದ್ದಾರೆ.
ಶಿರೂರು ಗುಡ್ಡ ಕುಸಿತ ಪ್ರದೇಶದ ಗಂಗಾವಳಿ ನದಿ ಅಂಚಿನಲ್ಲಿ ಲಾಂಗ್ ಆರ್ಮ್ ಬೂಮರ್ ಪೋಕ್ಲೈನ್ ಕಾರ್ಯಾಚರಣೆ ನಡೆಸುತ್ತಿದ್ದು, ಇದೇ ಭಾಗದಲ್ಲಿ ಲಾರಿ ಕಬ್ಬಿಣದ ಭಾಗ ಪೋಕ್ಲೈನ್ಗೆ ತಾಗಿದೆ. ಈ ಹಿನ್ನೆಲೆ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಶಾಸಕ ಸತೀಶ್ ಸೈಲ್ ಗಂಗಾವಳಿ ನದಿಯಲ್ಲಿ ಬೋಟ್ ಮೂಲಕ ತೆರಳಿ ಪರಿಶೀಲನೆ ನಡೆಸಿದ ಬಳಿಕ ಶಾಸಕ ಸತೀಶ್ ಸೈಲ್ ಲಾರಿ ಅವಶೇಷ ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ.
ಕೇರಳ ಮೂಲದ ಭಾರತ್ ಬೆಂಜ್ ಲಾರಿ ಹಾಗೂ ಚಾಲಕ ಅರ್ಜುನ್ ನಾಪತ್ತೆಯಾಗಿದ್ದರು. ಇದೀಗ ಲಾರಿ ಅವಶೇಷಗಳು ಸಿಕ್ಕಿದ್ದು, ಲಾರಿ ತೆರವಿಗೆ ಕಾರ್ಯಾಚರಣೆ ಮುಂದುವರೆದಿದೆ.
ಒಂದು ಟ್ರಕ್ ನೀರಿನಲ್ಲಿ ಮುಳುಗಿದೆ :ಶಿರೂರು ಭೂಕುಸಿತ ಕಾರ್ಯಾಚರಣೆ ಕುರಿತು ಬೆಂಗಳೂರಿನಲ್ಲಿ ಸಚಿವ ಕೃಷ್ಣ ಭೈರೇಗೌಡ ಅವರು ಮಾತನಾಡಿ, ಒಂದು ಟ್ರಕ್ ನೀರಿನಲ್ಲಿ ಮುಳುಗಿದೆ ಎಂಬುದು ಖಚಿತವಾಗಿದ್ದು, ನೌಕಾಪಡೆಯ ಡೀಪ್ ಡೈವರ್‌ಗಳು ಶೀಘ್ರದಲ್ಲೇ ಲಂಗರು ಹಾಕಲು ಪ್ರಯತ್ನಿಸುತ್ತಾರೆ ಎಂದು ತಿಳಿಸಿದ್ದಾರೆ.
ಟ್ರಕ್ ಅನ್ನು ನದಿಯಿಂದ ಮೇಲೆತ್ತಲು ಲಾಂಗ್ ಆರ್ಮ್ ಬೂಮರ್ ಅಗೆಯುವ ಯಂತ್ರವನ್ನು ಬಳಸಲಾಗುವುದು. ಸುಧಾರಿತ ಡ್ರೋನ್ ಆಧಾರಿತ ಇಂಟೆಲಿಜೆಂಟ್ ಅಂಡರ್‌ಗ್ರೌಂಡ್ ಬರಿಡ್ ಆಬ್ಜೆಕ್ಟ್ ಡಿಟೆಕ್ಷನ್ ಸಿಸ್ಟಮ್ ಅನ್ನು ಸಹ ಹುಡುಕಾಟಕ್ಕಾಗಿ ನಿಯೋಜಿಸಲಾಗಿದೆ. ನೀರಿನಲ್ಲಿ ನಾಪತ್ತೆಯಾದ ಮೃತ ದೇಹಗಳಿಗಾಗಿ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಮೂಲಕ ಹುಡುಕಾಟ ನಡೆಸುತ್ತಿದ್ದೇವೆ ಎಂದಿದ್ದಾರೆ.
ಶೋಧ ಕಾರ್ಯಕ್ಕೆ ಅತ್ಯಾಧುನಿಕ ಬೂಮ್ ಯಂತ್ರದ ಸಹಾಯ:ಅಂಕೋಲಾ ತಾಲೂಕಿನ ಶಿರೂರು ಹೆದ್ದಾರಿ ಮೇಲೆ ಗುಡ್ಡ ಕುಸಿತದಿಂದ ನಾಪತ್ತೆಯಾದವರಿಗಾಗಿ ಶೋಧಕಾರ್ಯ ಮುಂದುವರೆದಿದೆ. ಬುಧವಾರ ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆಗೆ ಸುಮಾರು 60 ಅಡಿ ಉದ್ದ ಹಾಗೂ 30 ಅಡಿ ಆಳದ ಮಣ್ಣು ತೆರವು ಮಾಡುವ ಅತ್ಯಾಧುನಿಕ ಬೂಮ್ ಯಂತ್ರವನ್ನು ತರಿಸಿ ಕಾರ್ಯಾಚರಣೆ ಮಾಡಲಾಗುತ್ತಿದೆ.
ಕಳೆದ 9 ದಿನಗಳಿಂದ ಗುಡ್ಡ ಕುಸಿತ ಪ್ರದೇಶದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಈವರೆಗೆ 8 ಮಂದಿಯ ಮೃತದೇಹಗಳು ಪತ್ತೆಯಾಗಿವೆ. ಇನ್ನೂ ಮೂವರು ಪತ್ತೆಯಾಗಬೇಕಿರುವ ಹಿನ್ನೆಲೆಯಲ್ಲಿ ಸೇನಾಪಡೆಗಳು, ನೌಕಾನೆಲೆ ಮುಳುಗು ತಜ್ಞರು, ಎನ್ಡಿಆರ್ಎಫ್, ಎಸ್ಡಿಆರ್ಎಫ್ ತಂಡಗಳಿಂದ ನಿರಂತರ ಶೋಧ ಕಾರ್ಯ ಪ್ರಗತಿಯಲ್ಲಿದೆ. ಈ ನಡುವೆ ಲಾರಿ ಪತ್ತೆಯಾಗಿದೆ ಎಂದು ಶಾಸಕರು ಹೇಳಿದ್ದಾರೆ.
ಇದನ್ನೂ ಓದಿ :ಶಿರೂರು ಗುಡ್ಡ ಕುಸಿತ ಕಾರ್ಯಾಚರಣೆಗೆ ಬಂತು ಅತ್ಯಾಧುನಿಕ ಬೂಮ್ ಯಂತ್ರ - Shiruru Hill Collapse