ಮನೆಯ ಮೇಲೆ ಬೃಹತ್ ಬಂಡೆ ಉರುಳಿ ಅವಘಡ (ETV Bharat) ಕಲಬುರಗಿ : ಗುಡ್ಡದಿಂದ ಬೃಹತ್ ಗಾತ್ರದ ಕಲ್ಲುಬಂಡೆಯೊಂದು ಕುಸಿದು ಬಿದ್ದು, ಮನೆಗೆ ಹಾನಿಯಾಗಿರುವ ಘಟನೆ ಚಿತ್ತಾಪುರ ತಾಲೂಕಿನ ಅಲ್ಲೂರು ಬಿ ಗ್ರಾಮದಲ್ಲಿ ನಡೆದಿದೆ.
ಚನ್ನಪ್ಪ ಬೋಳಿ ಎಂಬುವರಿಗೆ ಸೇರಿದ ಮನೆಯ ಮೇಲೆ ಪಕ್ಕದ ಗುಡ್ಡದಲ್ಲಿದ್ದ ದೊಡ್ಡ ಗಾತ್ರದ ಬಂಡೆಕಲ್ಲುಗಳು ಉರುಳಿ ಬಿದ್ದಿವೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಅದೃಷ್ಟಕ್ಕೆ ಬಂಡೆ ಬಿದ್ದಿರುವ ಭಾಗದಲ್ಲಿ ಯಾರೂ ಇರದ ಕಾರಣ ಆಗಬಹುದಾದ ಭಾರಿ ಅನಾಹುತ ತಪ್ಪಿದೆ. ಆದರೆ ಮನೆಯ ಇನ್ನೊಂದು ಭಾಗದಲ್ಲಿ ಆರು ಜನರಿದ್ದರು. ಇವರಲ್ಲಿ ಒಬ್ಬರ ಕಾಲಿಗೆ ಹಾಗೂ ಬಾಲಕನೊಬ್ಬನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂಬುದಾಗಿ ತಿಳಿದು ಬಂದಿದೆ.
ಬಂಡೆ ಬಿದ್ದ ಪರಿಣಾಮ ಮನೆಯಲ್ಲಿನ ವಸ್ತುಗಳು ನಾಶವಾಗಿವೆ. ಬಟ್ಟೆ, ಹಣ, ಧವಸ ಧಾನ್ಯಗಳು ಕಳೆದುಕೊಂಡ ಕುಟುಂಬ ಕಣ್ಣಿರಲ್ಲಿ ಕೈತೊಳೆಯುತ್ತಿದೆ. ಬಂಡೆ ತೆರವುಗೊಳಿಸಿ ಮನೆ ನಿರ್ಮಿಸುವವರೆಗೆ ಇರೋದಕ್ಕೆ ಸೂರು ಇಲ್ಲದಿರುವುದರಿಂದ ಕುಟುಂಬ ಅಕ್ಷರಶಃ ಬೀದಿಗೆ ಬಂದಿದೆ. ಹೀಗಾಗಿ ಜಿಲ್ಲಾಡಳಿತ ಹಾಗೂ ಸರ್ಕಾರ ನೆರವಿಗೆ ಬರುವಂತೆ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ :ಭೂಮಿ ಕಂಪಿಸಿದ ಭಾಗದಿಂದ 4 ಕಿ.ಮೀ ದೂರದಲ್ಲಿ ರಸ್ತೆ ಮೇಲೆ ಬಿದ್ದ ಬಂಡೆಗಲ್ಲು